×
Ad

ಶಾಲಾಮಕ್ಕಳಿಗೆ ಮೊಟ್ಟೆ ನಿರಾಕರಿಸಿ, ಶ್ರೀಮಂತರಿಗೆ ಬೀಫ್ ಉಣಬಡಿಸುವ ಟಿವಿ ಮೋಹನ್ ದಾಸ್ ಪೈ ಹಿಪಾಕ್ರಸಿ ಪ್ರಶ್ನಿಸಿ ಪತ್ರ

Update: 2017-06-03 20:08 IST

"ಇಸ್ಕಾನ್"ನ ಅಕ್ಷಯಪಾತ್ರ ಮೂಲಕ ಮಕ್ಕಳ ಬಿಸಿಯೂಟಕ್ಕೆ ಮೊಟ್ಟೆ ನೀಡುವುದನ್ನು ನಿರಾಕರಿಸುವ ಟಿವಿ ಮೋಹನ್ ದಾಸ್ ಪೈ, ತಮ್ಮ ರೆಸ್ಟೊರೆಂಟ್ ನಲ್ಲಿ ಮಾಂಸವನ್ನೂ ಕುಟುಂಬದ ರೆಸ್ಟೊರೆಂಟ್'ನಲ್ಲಿ ಬೀಫ್ ತಿನಿಸುಗಳನ್ನೂ ಮಾರುತ್ತಾರೆ. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳನ್ನು ಪೌಷ್ಟಿಕ ಆಹಾರದಿಂದ ವಂಚಿಸಿ , ಮೈಯಲ್ಲಿ ಕೊಬ್ಬು ಹೆಚ್ಚಿರುವ ಶ್ರೀಮಂತರಿಗೆ "ಪ್ರೊಟೀನ್ ಭರಿತ" ಬೀಫ್ ನೀಡುವ ಪೈ ದ್ವಿಮುಖ ನೀತಿಯನ್ನು ಪ್ರಶ್ನಿಸಿ ಪತ್ರ ಬರೆದಿದ್ದಾರೆ ವಿಚಾರವಾದಿ ಹೋರಾಟಗಾರ ಡಾ.ನರೇಂದ್ರ ನಾಯಕ್. 

ಪ್ರಿಯ ಪೈಮಾಮ್,

ನಮಸ್ಕಾರ.

ಎರಡನೇ ಬಾರಿಗೆ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಈ ಹಿಂದೆ ನೀವು ಟಿಪ್ಪು ಸುಲ್ತಾನ್ ಕೊಂಕಣಿ ಸಮುದಾಯದ ಮೇಲೆ ದೌರ್ಜನ್ಯವೆಸಗಿದ್ದನೆಂದು ಕಾರಣ ನೀಡಿ ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾಗ ಪತ್ರ ಬರೆದಿದ್ದೆ. ಆ ಸಂದರ್ಭದಲ್ಲಿ ಪೋರ್ಚುಗೀಸರು ದನದ ಮಾಂಸ ತಿನ್ನಿಸಿ ನಮ್ಮ ಪೂರ್ವಜರನ್ನು ರೋಮನ್ ಕ್ಯಥೋಲಿಕ್ ಧರ್ಮಕ್ಕೆ ಮತಾಂತರಗೊಳಿಸಿದ್ದರ ಕುರಿತು ಬರೆದಿದ್ದೆ. ಅದರಿಂದ ತಪ್ಪಿಸಿಕೊಂಡು ಓಡಿದವರು ಗೌಡ ಸಾರಸ್ವತ ಬ್ರಾಹ್ಮಣರಾಗಿ ಉಳಿದರು. ನಾವು ಅವರ ವಂಶಸ್ಥರು. ಇಂದಿಗೂ ನಮ್ಮ ಸಮುದಾಯದ ಕೆಲವರಲ್ಲಿ, ನಿಮ್ಮಂಥವರಲ್ಲಿ ನಮ್ಮ ಪೂರ್ವಜರ ಚೈತನ್ಯ ಹರಿದುಬಂದಿದೆ ಎಂದು ನಾನು ಭಾವಿಸಿದ್ದೇನೆ. ಆದರೆ ನನ್ನಲ್ಲಿ ಆ ಚೈತನ್ಯವಿಲ್ಲ. ಏಕೆಂದರೆ ನಾನು ದನದ ಮಾಂಸವನ್ನು ತಿಂದಿದ್ದೇನೆ ಮತ್ತು ತಿನ್ನುವುದನ್ನು ಮುಂದುವರೆಸುತ್ತೇನೆ. ಹಾಗಿದ್ದೂ ನಾನು ಸಮುದಾಯದಲ್ಲಿ ಹುಟ್ಟಿದವನಾದ್ದರಿಂದ ನನ್ನನ್ನು ಜಿಎಸ್’ಬಿ ಎಂದೇ ಗಣಿಸಲಾಗುತ್ತದೆ.

ಇರಲಿ, ಆ ವಿಷಯವನ್ನು ಅಲ್ಲಿಗೇ ಬಿಡೋಣ. ನೀವು ಅಕ್ಷಯಪಾತ್ರ ಪ್ರತಿಷ್ಠಾನದ ಟ್ರಸ್ಟಿ ಆಗಿದ್ದೀರಿ. ಅದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಸಂಸ್ಥೆ ಎಂದು ತನ್ನನ್ನು ತಾನು ಹೊಗಳಿಕೊಳ್ಳುತ್ತದೆ. ಪರವಾಗಿಲ್ಲ, ಅದನ್ನು ನಾನು ಅಭಿನಂದಿಸುತ್ತೇನೆ. ಆದರೆ ಈ ಹೊಗಳಿಕೆಯ ಹೇಳಿಕೆಯಲ್ಲೊಂದು ಚಿಕ್ಕ ತಿದ್ದುಪಡಿಯಾಗಬೇಕಿದೆ. ನೀವು ನಿಮ್ಮನ್ನು ‘ದೊಡ್ಡಸಂಖ್ಯೆಯಲ್ಲಿ ಮಕ್ಕಳಿಗೆ ಸಾತ್ವಿಕ ಆಹಾರ ನೀಡುವ ಸಂಸ್ಥೆ’ ಎಂದು ಬದಲಿಸಿಕೊಳ್ಳಿ!

ಈ ಸಾತ್ವಿಕ ವ್ಯವಹಾರದ ಹುನ್ನಾರಗಳಲ್ಲಿ ಮಕ್ಕಳಿಗೆ ಮೊಟ್ಟೆ ನಿರಾಕರಿಸುವುದು ಮುಖ್ಯವಾದದ್ದು. ಮೊಟ್ಟೆ ನೀಡಿಕೆಯನ್ನು ವಿರೋಧಿಸುವ ಮೂಲಕ ಶಾಲಾಮಕ್ಕಳನ್ನು ಪೌಷ್ಟಿಕ ಆಹಾರದಿಂದ ನೀವು ವಂಚಿಸುತ್ತಿದ್ದೀರಿ. ಮೊಟ್ಟೆ ಬೇಯಿಸುವುದು ನಿಮ್ಮ ಧಾರ್ಮಿಕ ತತ್ತ್ವಗಳಿಗೆ ವಿರುದ್ಧ ಎಂಬ ಕಾರಣಕ್ಕೆ ಮಕ್ಕಳಿಂದ ಸತ್ವಯುತ, ಪ್ರೋಟಿನ್’ಭರಿತ ಆಹಾರವನ್ನು ಕಸಿಯುತ್ತಿದ್ದೀರಿ. ಆದ್ದರಿಂದ ನೀವು ನಿಮ್ಮನ್ನು ‘ಮಕ್ಕಳಿಗೆ ಸಾತ್ವಿಕ ಆಹಾರ ನೀಡುವ ಸಂಸ್ಥೆ’ ಎಂದು ಕರೆದುಕೊಳ್ಳುವುದು ಒಳ್ಳೆಯದು.

ನಿಮ್ಮ ನೀತಿಯನ್ನು ಹೇರುವಲ್ಲಿ ಯಶಸ್ವಿಯಾಗಿರುವ ನೀವು ಇತ್ತೀಚೆಗೆ ಮಾಡಿದ ಟ್ವೀಟ್ ಒಂದನ್ನು ಗಮನಿಸಿದೆ. ಜನರಿಗೆ ತಮ್ಮ ಆಹಾರವನ್ನು ಆಯ್ದುಕೊಳ್ಳುವ ಹಕ್ಕು ಇರಬೇಕು ಎಂದು ನೀವು ಟ್ವೀಟ್ ಮಾಡಿದ್ದೀರಿ. ನಿಜಕ್ಕೂ ಅದು ಪ್ರಶಂಸನೀಯ. ಆದರೆ ಇಂಥಾ ಅಭಿಪ್ರಾಯವುಳ್ಳ ನೀವು ಟ್ರಸ್ಟಿ ಆಗಿರುವ ಸಂಸ್ಥೆ ಅದು ಹೇಗೆ ತನ್ನ ‘ಸಾತ್ವಿಕ ಆಹಾರ’ ನಿಯಮವನ್ನು ಮಕ್ಕಳ ಮೇಲೆ ಹೇರುತ್ತದೆ ಅನ್ನೋದೇ ಆಶ್ಚರ್ಯ. ಮಕ್ಕಳಿಗೆ ಪ್ರೋಟಿನ್’ಭರಿತ ಮೊಟ್ಟೆಯನ್ನು ಬಿಸಿಯೂಟಕ್ಕೆ ಒದಗಿಸಬೇಕು ಅನ್ನುವ ಪ್ರಸ್ತಾಪ ಬಂದಾಗ ಮೊಟ್ಟಮೊದಲಿಗೆ ವಿರೋಧಿಸಿದ್ದೇ ನಿಮ್ಮ ಸಂಸ್ಥೆ. ದಲಿತ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳನ್ನು ಆಹಾರಸರಪಳಿಯಿಂದ ಹೊರಗೆ ಇಡುವುದಕ್ಕಾಗಿಯೇ ಈ ಹುನ್ನಾರ ಎಂಬುದು ನನ್ನ ಬಲವಾದ ಅನ್ನಿಸಿಕೆ. ನನ್ನ ಅನ್ನಿಸಿಕೆ ತಪ್ಪಾಗಿದ್ದರೆ, ದಯಮಾಡಿ ನಿಮ್ಮ ಸಂಸ್ಥೆಯಲ್ಲಿ ಅದೆಷ್ಟು ಜನ ದಲಿತರು ಅಥವಾ ಒಬಿಸಿ ಸಮುದಾಯದವರು ಆಹಾರ ತಯಾರಿಸಲಾಗಲೀ ಬಿಸಿಯೂಟ ವಿತರಣೆಗಾಗಲೀ ನಿಯುಕ್ತರಾಗಿದ್ದಾರೆ ಅನ್ನುವುದನ್ನು ತಿಳಿಸಿ.

ಆದರೆ ಈ ಸಾತ್ವಿಕತೆ (ಈ ಪದವನ್ನು ನಾನು ಬಳಸಬಹುದಾದರೆ) ನಿಮ್ಮ ವ್ಯವಹಾರಕ್ಕೆ ಅನ್ವಯವಾಗುವುದಿಲ್ಲ ಅನ್ನುವುದೇ ವಿಚಿತ್ರವಾಗಿ ತೋರುತ್ತದೆ. ಗ್ರಾಹಕರಿಗೆ ನಿಗದಿತ ಅವಧಿಯೊಳಗೆ ನಿರ್ದಿಷ್ಟ ಮಾಂಸವನ್ನು ತಾಜಾ ಇರುವಂತೆ ತಲುಪಿಸುವ ‘ಲಿಶಿಯಸ್’ ಆಹಾರ ಸಂಸ್ಥೆಯ ಒಡೆಯರು ನೀವು. ಅಷ್ಟೇ ಅಲ್ಲ, ನಿಮ್ಮ ಕುಟುಂಬದ ಒಡೆತನದಲ್ಲಿರುವ ‘154 ಬ್ರೇಕ್ ಫಾಸ್ಟ್ ಕ್ಲಬ್’ ಬೀಫ್ ಬರ್ಗರ್ ಮೊದಲಾದ ದನದ ಮಾಂಸದ ತಿನಿಸುಗಳನ್ನು ಒದಗಿಸುತ್ತದೆ ಎಂದೂ ತಿಳಿದುಬಂತು. ಇದರರ್ಥ, ನಮ್ಮ ಪೂರ್ವಜರಿಗೆ ಪೋರ್ಚುಗೀಸರು ಕ್ರೈಸ್ತರಾಗಿ ಮತಾಂತರಿಸಲು ಏನು ಮಾಡಿದ್ದರೋ ನೀವೂ ಅದನ್ನೇ ಮಾಡುತ್ತಿದ್ದೀರಿ ಎಂದಾಯ್ತು!!

ನಿಮ್ಮ ಪ್ರಕಾರ ಯಾವುದು ಐತಿಹಾಸಿಕ ಪ್ರಮಾದವಾಗಿತ್ತೋ ಅದನ್ನು ಸರಿಪಡಿಸುವುದು ನಿಮ್ಮ ಕರ್ತವ್ಯವಾಗುತ್ತದೆ. ಆದರೆ ನೀವೂ ಅದೇ ಪ್ರಮಾದವನ್ನೇ ಪುನರಾವರ್ತಿಸುತ್ತಿದ್ದೀರಿ. ಯಾರು ಇತಿಹಾಸವನ್ನು ಮರೆಯುತ್ತಾರೋ ಅವರು ತಪ್ಪುಗಳನ್ನು ಪುನರಾವರ್ತಿಸುತ್ತಾರೆ ಎಂದಿದ್ದಾನೆ ಜಾರ್ಜ್ ಸಾಂಟಯಾನ. ನೀವು ಕೂಡ ಇತಿಹಾಸ ಮರೆತು ವರ್ತಿಸುತ್ತಿದ್ದೀರಿ. ಅಥವಾ, ನೀವು ಇಸ್ಕಾನ್ ಮೂಲಕ ಸಾತ್ವಿಕ ಆಹಾರವನ್ನು ಪ್ರಮೋಟ್ ಮಾಡ್ತಿರುವುದು ಹಿಂದುಳಿದ ಜಾತಿ ವರ್ಗಗಳ, ಸರ್ಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳನ್ನು ಪೌಷ್ಠಿಕ ಆಹಾರದಿಂದ ದೂರ ಇಡಲಿಕ್ಕಾಗಿಯೇ ಅನ್ನುವುದನ್ನು ಒಪ್ಪಿಕೊಳ್ಳಿ.

“ಕಿತ್ಲೆ ಫಾಯ್ದೆ ಅಸ್’ರೇ?” ಅನ್ನುವ ಟಿಪಿಕಲ್ ‘ಅಮ್ಚಿಗೆಲೆ’ ನುಡಿಗಟ್ಟನ್ನು ನಿಮಗೆ ಈ ಹೊತ್ತು ನೆನಪಿಸಬಯಸುತ್ತೇನೆ. ಇದರಿಂದ ನಿಮ್ಮ ದ್ವಿಮುಖ ನೀತಿಯ ವಿವರಣೆ ಸಿಕ್ಕುಹೋಗುತ್ತದೆ. ಒಂದು ಕಡೆ ಹಿಂದುತ್ವ, ಗೋಮಾತೆ ಎಂದು ಮಾತಾಡುತ್ತಾ ಮತ್ತೊಂದು ಕಡೆ ಅದರ ಮಾಂಸದಿಂದ ತಯಾರಿಸಿದ ಪದಾರ್ಥಗಳನ್ನು ಮಾರುತ್ತಿದ್ದೀರಿ. ತಾಯಿಯೆಂದು ಕರೆಯುತ್ತಲೇ ಅದನ್ನು ಕೊಂದು ಬಡಿಸುವ ಉದ್ಯಮ ನಡೆಸುತ್ತಿದ್ದೀರಿ. ಅಗತ್ಯದಲ್ಲಿರುವ ಬಡ ಮಕ್ಕಳಿಗೆ ಕಡಿಮೆ ಪ್ರೊಟೀನ್’ಯುಕ್ತ ಆಹಾರವನ್ನು ನೀಡುವುದು ಹಾಗೂ ಕೊಬ್ಬು ಹೆಚ್ಚಾದ ಶ್ರೀಮಂತರಿಗೆ ಉನ್ನತ ಪ್ರೊಟೀನ್’ಯುಕ್ತ ಆಹಾರವನ್ನು ಉಣಬಡಿಸುವುದು ನಿಮ್ಮ ವ್ಯವಹಾರವಾಗಿದೆ.

ನೀವು ನಿಜವಾಗಿಯೂ ನಿಮ್ಮ ಸಾತ್ವಿಕ ಆಹಾರ ತತ್ತ್ವಕ್ಕೆ ಬದ್ಧರಾಗಿ, ಗೋಮಾತೆ ಆರಾಧನೆಯನ್ನು ನಡೆಸುವವರೇ ಆಗಿದ್ದರೆ, ಈ ಎಲ್ಲ ತಾಮಸಿಕ ವ್ಯವಹಾರಗಳಿಂದ ಹೊರಬಂದು, ಸಾತ್ವಿಕ ಆಹಾರ ಪದಾರ್ಥಗಳಾದ ದಾಲಿ ತೋವ್, ಬಿಬ್ಬೆ ಉಪ್ಕರಿ, ಮೊಗ್ಗೆ ಕೊದ್ದೆಲ್ ಮೊದಲಾದ ಕೊಂಕಣಿ ಖಾದ್ಯಗಳ ಪ್ರಮೋಷನ್’ನಲ್ಲಿ ತೊಡಗಿಕೊಳ್ಳಿ.

ಸಪ್ರೇಮ ನಮಸ್ಕಾರ,

ನರೇಂದ್ರ ನಾಯಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News