ಐಸಿಸ್ ವಿರೋಧಿ ಸಮರದಲ್ಲಿ ಇರಾಕ್, ಸಿರಿಯದಲ್ಲಿ 484 ನಾಗರಿಕರ ಬಲಿ

Update: 2017-06-03 15:12 GMT

 ವಾಶಿಂಗ್ಟನ್, ಜೂ.2: 2014ರಿಂದೀಚೆಗೆ ಇರಾಕ್ ಹಾಗೂ ಸಿರಿಯಾದಲ್ಲಿ ಐಸಿಸ್ ಉಗ್ರರ ವಿರುದ್ಧ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ದಾಳಿಗಳಲ್ಲಿ ಕನಿಷ್ಠ 484 ಮಂದಿ ನಾಗರಿಕರು ಮೃತಪಟ್ಟಿರುವ ಸಾಧ್ಯತೆಯಿದೆಯೆಂದು ಅಮೆರಿಕ ಸೇನೆಯ ಕಾರ್ಯಾಲಯ ಪೆಂಟಾಗನ್ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

    ಅಮೆರಿಕ ನೇತೃತ್ವದ ಮೈತ್ರಿಪಡೆ ಬಿಡುಗಡೆಗೊಳಿಸಿರುವ ಈ ಅಂಕಿಅಂಶಗಳು, ‘ ಏರ್‌ವಾರ್ಸ್‌’ನಂತಹ ಸರಕಾರೇತರ ಸಂಘಟನೆಗಳು ನಾಗರಿಕ ಸಾವುನೋವಿನ ಬಗ್ಗೆ ಪ್ರಕಟಿಸಿರುವ ಅಂದಾಜು ಸಂಖ್ಯೆಗಿಂತ ಕಡಿಮೆಯಾಗಿದೆ. ಪೆಂಟಗಾನ್, ಎಪ್ರಿಲ್ 30ರಂದು ಪ್ರಕಟಿಸಿದ ಹಿಂದಿನ ವರದಿಗಿಂತ ಈ ಸಲದ ವರದಿಯಲ್ಲಿ ನಾಗರಿಕ ಸಾವುನೋವಿನ ಸಂಖ್ಯೆ 132ರಷ್ಟು ಅಧಿಕವಾಗಿದೆ.

ಐಸಿಸ್ ಉಗ್ರರ ವಿರುದ್ಧ ನಡೆಸಲಾಗುವ ಸೇನಾ ಕಾರ್ಯಾಚರಣೆಯ ವೇಳೆ ನಾಗರಿಕರ ರಕ್ಷಣೆಯ ಕುರಿತಾದ ಮಾನ ದಂಡಗಳನ್ನು ಸಡಿಲಗೊಳಿಸಲಾಗಿದೆಯೆಂಬ ವರದಿಗಳನ್ನು ಮಿತ್ರಪಡೆಯು ನಿರಾಕರಿಸಿದೆ. ಕಾರ್ಯಾಚರಣೆಯು ಜನದಟ್ಟಣೆಯ ಸ್ಥಳಗಳಿಗೆ ಹಾಗೂ ನಗರ ಪ್ರದೇಶಗಳಿಗೆ ವಿಸ್ತರಣೆಗೊಂಡಿರುವುದು ನಾಗರಿಕ ಸಾವುನೋವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವೆಂದು ಅದು ಸಮಜಾಯಿಷಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News