ಐರ್‌ಲ್ಯಾಂಡ್‌ಗೆ ಭಾರತ ಮೂಲದ ಪ್ರಧಾನಿ

Update: 2017-06-03 15:41 GMT

 ಲಂಡನ್, ಜೂ.3: ಮುಂಬೈ ಮೂಲದ ವೈದ್ಯರೊಬ್ಬರ ಪುತ್ರ ಲಿಯೊ ವರದ್‌ಕರ್ ಐರ್‌ಲ್ಯಾಂಡ್‌ನ ಆಡಳಿತಾರೂಢ ಫೈನ್ ಗಾಯೆಲ್ ಪಕ್ಷದ ಶಾಸಕಾಂಗ ನಾಯಕನಾಗಿ ಆಯ್ಕೆಯಾಗಿದ್ದು, ಪ್ರಧಾನಿ ಹುದ್ದೆಯನ್ನು ಏರಲಿದ್ದಾರೆ.

ಇದರೊಂದಿಗೆ ಕ್ರೈಸ್ತರು ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಮೊದಲ ಬಾರಿಗೆ ಏಶ್ಯನ್ನರೊಬ್ಬರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ.

  ಪ್ರಧಾನಿ ಪಟ್ಟಕ್ಕೆ 38 ವರ್ಷದ ವರದ್‌ಕರ್ ಅವರ ಆಯ್ಕೆಯನ್ನು ಸಂಸತ್ ಈ ತಿಂಗಳ ಅಂತ್ಯದಲ್ಲಿ ಅನುಮೋದಿಸಲಿದೆ. ಇದರೊಂದಿಗೆ ಐರ್‌ಲ್ಯಾಂಡ್‌ನ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯೆಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಲಿದ್ದಾರೆ.

 ಅಲ್ಪ ಬಹುಮತ ಹೊಂದಿರುವ ಫೈನ್‌ಗಾಯೆಲ್ ಪಕ್ಷದ ಶಾಸಕಾಂಗ ಪಕ್ಷದ ನೂತನ ನಾಯಕರಾಗಿರುವ ವರಾಡ್‌ಕರ್, ಪ್ರಧಾನಿಯಾಗುವ ಮೊದಲು ತನ್ನ ಸಮ್ಮಿಶ್ರ ಸರಕಾರದಲ್ಲಿರುವ ಪಕ್ಷೇತರ ಸದಸ್ಯರ ಅನುಮೋದನೆಯನ್ನು ಪಡೆಯಬೇಕಿದೆ.

ಮುಂಬೈ ಮೂಲದ ವೈದ್ಯ ಅಶೋಕ್ ವರಾಡ್‌ಕರ್, 1960ರಲ್ಲಿ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಮರಿಯಮ್ ಎಂಬ ನರ್ಸ್‌ರನ್ನು ಪ್ರೇಮಿಸಿ ವಿವಾಹವಾಗಿದ್ದರು. ಅವರಿಗೆ ಜನಿಸಿದ ಲಿಯೋ ವರಾಡ್‌ಕರ್ ರಾಜಕೀಯಕ್ಕೆ ಧುಮುಕುವ ಮುನ್ನ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಅವರು ಐರ್‌ಲ್ಯಾಂಡ್ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

 ತಾನು ಸಲಿಂಗಿಯೆಂದು ಲಿಯೊ 2015ರಲ್ಲಿ ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಆರಂಭದಲ್ಲಿ ಪುತ್ರನ ಘೋಷಣೆಯಿಂದ ತನಗೆ ಆಘಾತವಾಯಿತಾದರೂ, ಬಳಿಕ ಆತನನ್ನು ಬೆಂಬಲಿಸಿದೆ ಎಂದು ತಂದೆ ಅಶೋಕ್ ಹೇಳುತ್ತಾರೆ.

 ಪ್ರಧಾನಿ ಎಂಡಾ ಕೆನ್ನಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಫೈನ್‌ಗಾಯೆಲ್ ಪಕ್ಷದ ನಾಯಕ ಸ್ಥಾನದಿಂದ ನಿರ್ಗಮಿಸಿದ್ದಾರೆ. ವರಾಡ್‌ಕರ್ ತನ್ನ ಪಕ್ಷದ ಬಹುತೇಕ ಕಾರ್ಯಕರ್ತರು ಹಾಗೂ ಸಚಿವರ ಬೆಂಬಲವನ್ನು ಹೊಂದಿದ್ದಾರೆನ್ನಲಾಗಿದೆ.

ಪ್ರಧಾನಿ ಹುದ್ದೆಗಾಗಿ ಪಕ್ಷದಲ್ಲಿ ನಡೆದ ಮೂರು ಹಂತಗಳ ಆಂತರಿಕ ಚುನಾವಣೆಗಳೂ ಸೇರಿದಂತೆ ಅಂತಿಮ ಮತ ಎಣಿಕೆಯಲ್ಲಿ ವರದ್‌ಕರ್ ಶೇ. 60 ಮತಗಳನ್ನು ಹಾಗೂ ಅವರ ಪ್ರತಿಸ್ಪರ್ಧಿ ಹಾಲಿ ವಸತಿ ಸಚಿವ ಕೊವೆನಿ ಶೇ.40ರಷ್ಟು ಮತಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News