ಪೊಲೀಸರ ಗುಂಡಿಗೆ ನಕ್ಸಲ್ ಬಲಿ
ರಾಯ್‌ಪುರ,ಜೂ.4: ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ಸುರಖೇಡಾ ಗ್ರಾಮದ ಬಳಿಯ ಅರಣ್ಯದಲ್ಲಿ ರವಿವಾರ ಬೆಳಿಗ್ಗೆ ಪೊಲೀಸರೊಂದಿಗಿನ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಮೃತಪಟ್ಟಿದ್ದಾನೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು ಭೈರಾಮಗಡ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಸುರಖೇಡಾ ಗ್ರಾಮದ ಸಮೀಪ ಅರಣ್ಯ ಭಾಗದಲ್ಲಿದ್ದಾಗ ನಕ್ಸಲರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪೊಲೀಸರು ಪ್ರತಿದಾಳಿ ನಡೆಸಿದ್ದರು. ಈ ಸಂದರ್ಭ ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದ ಮಾವೋವಾದಿ ಸಮವಸ್ತ್ರದಲ್ಲಿದ್ದ ತಮ್ಮ ಸಹಚರನ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಕೆ.ಎಲ್.ಧ್ರುವ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಘಟನಾ ಸ್ಥಳದಿಂದ ಬಂದೂಕು, ನಾಡಪಿಸ್ತೂಲು, ಡೆಟೋನೇಟರ್‌ಗಳು, ಟಿಫಿನ್ ಬಾಂಬ್ ಮತ್ತು ಕೆಲವು ವೈರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹತ ನಕ್ಸಲನನ್ನು ರತನ್ ಉಜಿ ಅಲಿಯಾಸ್ ಹೇಮ್ಲಾ ರತನ್ ಎಂದು ಗುರುತಿಸ ಲಾಗಿದೆ. ಮಿರ್ತೂರ ಸ್ಥಳೀಯ ಸಾಂಸ್ಥಿಕ ದಳದ ಉಪ ಕಮಾಂಡರ್ ಮತ್ತು ಮಾಟವಾಡಾದ ಜನತನ್ ಸರ್ಕಾರ್ ಗುಂಪಿನ ಮುಖಸ್ಥ ಹುದ್ದೆ ಸೇರಿದಂತೆ ನಿಷೇಧಿತ ಸಿಪಿಐ(ಮಾವೋವಾದಿ)ನ ವಿವಿಧ ಪ್ರಮುಖ ಹುದ್ದೆಗಳನ್ನು ಆತ ನಿರ್ವಹಿಸಿದ್ದ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.