ಶಂಕಿತ ಚೀನಿ ಹೆಲಿಕಾಪ್ಟರ್‌ನಿಂದ ಭಾರತೀಯ ವಾಯುಪ್ರದೇಶ ಉಲ್ಲಂಘನೆ
Update: 2017-06-04 15:20 IST
ಡೆಹ್ರಾಡೂನ್,ಜೂ.4: ಭಾರತ-ಚೀನಾ ಗಡಿಗೆ ಸಮೀಪದ ಉತ್ತರಾಖಂಡ್‌ನ ಚಮೋಲಿಯಲ್ಲಿ ಹಾರಾಡುವ ಮೂಲಕ ಶಂಕಿತ ಚೀನಿ ಹೆಲಿಕಾಪ್ಟರ್‌ವೊಂದು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದೆ.
ಶನಿವಾರ ಬೆಳಿಗ್ಗೆ ಟಿಬೆಟ್ ಭಾಗದಿಂದ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ್ದ ಹೆಲಿಕಾಪ್ಟರ್ ಸುಮಾರು ನಾಲ್ಕು ನಿಮಿಷಗಳ ಹಾರಾಟದ ಬಳಿಕ ವಾಪಸಾ ಗಿದೆ ಎಂದು ಎಸ್‌ಪಿ ತೃಪ್ತಿ ಭಟ್ ತಿಳಿಸಿದರು. ಆದರೆ ಅದು ಚೀನಿ ಹೆಲಿಕಾಪ್ಟರ್ ಆಗಿತ್ತು ಎನ್ನುವುದನ್ನು ದೃಢಪಡಿಸಲು ಅವರು ನಿರಾಕರಿಸಿದರು.
ಈ ಹಿಂದೆಯೂ ಚಮೋಲಿ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ಚೀನಾದಿಂದ ಭಾರತೀಯ ವಾಯುಪ್ರದೇಶದ ಉಲ್ಲಂಘನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದವು.
ಅದು ಮಿಲಿಟರಿಗೆ ಸೇರಿದ ಹೆಲಿಕಾಪ್ಟರ್ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಭಟ್, ಆದರೆ ಯಾವುದೇ ಪೂರ್ವಾನುಮತಿಯಿಲ್ಲದೆ ಭಾರತವನ್ನು ಅದು ಪ್ರವೇಶಿಸಿದ್ದು, ಇದು ಭಾರತೀಯ ವಾಯುಪ್ರದೇಶದ ಉಲ್ಲಂಘನೆಯಾಗಿದೆ ಎಂದರು.