×
Ad

ಸದ್ದಾಂ ಅಮೆರಿಕದ ಸೈನಿಕರಿಗೆ ಕತೆಗಳನ್ನು ಹೇಳುತ್ತಾ ಕೊನೆಯ ದಿನಗಳನ್ನು ಕಳೆದರು!

Update: 2017-06-04 19:03 IST

ನ್ಯೂಯಾರ್ಕ್, ಜೂ. 4: ಇರಾಕ್‌ನ ಮಾಜಿ ಆಡಳಿತಗಾರ ಸದ್ದಾಂ ಹುಸೈನ್ ತನ್ನ ಕೊನೆಯ ದಿನಗಳನ್ನು ಅಮೆರಿಕನ್ ಗಾಯಕಿ ಮೇರಿ ಜೆ. ಬಿಲ್ಜ್‌ರ ಸಂಗೀತ ಕೇಳುತ್ತಾ, ಮಫಿನ್ (ಕಪ್ ಆಕಾರದ ಒಂದು ರೀತಿಯ ಬ್ರೆಡ್)ಗಳನ್ನು ತಿನ್ನುತ್ತಾ ಹಾಗೂ ಜೈಲಿನ ಕಾವಲುಗಾರರಿಗೆ ಕತೆಗಳನ್ನು ಹೇಳುತ್ತಾ ಕಳೆದರು ಎಂದು ಹೊಸ ಪುಸ್ತಕವೊಂದು ಹೇಳಿದೆ.

ಸರ್ವಾಧಿಕಾರಿಯ ಕೊನೆಯ ದಿನಗಳು ಮತ್ತು ಅವರ ಅಮೆರಿಕನ್ ಕಾವಲುಗಾರರ ಅನುಭವಗಳನ್ನು ವಿಲ್ ಬ್ಯಾರ್ಡನ್‌ವರ್ಪರ್‌ರ ನೂತನ ಪುಸ್ತಕ ‘ದ ಪ್ರಿಸನರ್ ಇನ್ ಹಿಸ್ ಪ್ಯಾಲೇಸ್: ಸದ್ದಾಂ ಹುಸೈನ್, ಹಿಸ್ ಅಮೆರಿಕನ್ ಗಾರ್ಡ್ಸ್, ಆ್ಯಂಡ್ ವಾಟ್ ಹಿಸ್ಟರಿ ಲೀವ್ಸ್ ಅನ್‌ಸೆಡ್’ ಮೆಲುಕು ಹಾಕಿದೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

ಇರಾಕನ್ನು ಮೂರು ದಶಕಗಳ ಕಾಲ ಆಳಿದ್ದ ಸದ್ದಾಂರನ್ನು 2006ರಲ್ಲಿ ಅವರ 69ನೆ ವರ್ಷದಲ್ಲಿ ನೇಣಿಗೇರಿಸಲಾಗಿತ್ತು. ಅವರು ಬಗ್ದಾದ್‌ನಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದಾಗ ಅವರ ಮೇಲೆ ನಿಗಾ ಇಡಲು ಅಮೆರಿಕದ ಸೈನಿಕರ ಒಂದು ಗುಂಪನ್ನು ನಿಯೋಜಿಸಲಾಗಿತ್ತು. ಆ ಸೈನಿಕರು ತಮ್ಮನ್ನು ‘ದ ಸೂಪರ್ ಟ್ವೆಲ್ವ್’ ಎಂಬುದಾಗಿ ಕರೆದುಕೊಂಡರು.

ಈ 12 ಅಮೆರಿಕನ್ ಸೈನಿಕರು ಆರು ತಿಂಗಳ ಕಾಲ ಸದ್ದಾಂರ ಖಾಸಗಿ ಅಂಗರಕ್ಷಕರಾಗಿದ್ದ ಆರು ತಿಂಗಳ ಅವಧಿಯಲ್ಲಿ ಮೊದಲು ತಮ್ಮ ತಮ್ಮಾಳಗೆ ಬಾಂಧವ್ಯ ಬೆಳೆಸಿಕೊಂಡರು. ಬಳಿಕ, ಸದ್ದಾಂ ಕೊನೆಯ ದಿನಗಳಲ್ಲಿ ಅವರೊಂದಿಗೂ ಬಾಂಧವ್ಯ ಬೆಳೆಸಿದರೆನ್ನಲಾಗಿದೆ. ಆ ಸೈನಿಕರಲ್ಲೇ ಒಬ್ಬ ಈ ಪುಸ್ತಕ ಬರೆದಿದ್ದಾರೆ.

ಸದ್ದಾಂ ತನ್ನ ಹೊರಾಂಗಣದ ಒಂದು ಮೂಲೆಯಲ್ಲಿದ್ದ ಕಳೆ ಗಿಡಗಳಿಗೆ ದಿನವೂ ನೀರು ಹಾಕಿ ಹೂವಿನ ಗಿಡಗಿಂತಲೂ ಹೆಚ್ಚಾಗಿ ಜೋಪಾನ ಮಾಡುತ್ತಿದ್ದರು ಎಂದು ಪುಸ್ತಕ ಹೇಳುತ್ತದೆ.

 ತನ್ನ ಆಹಾರದ ಬಗ್ಗೆ ಸದ್ದಾಂ ಹೆಚ್ಚಿನ ನಿಗಾ ವಹಿಸುತ್ತಿದ್ದರು. ಅವರು ತನ್ನ ಬೆಳಗಿನ ಉಪಾಹಾರವನ್ನು ಹಂತಗಳಲ್ಲಿ ಸೇವಿಸುತ್ತಿದ್ದರು. ಅವರು ಮೊದಲು ಒಂದು ಆಮ್ಲೆಟ್, ಬಳಿಕ ಒಂದು ಮಫಿನ್ ಹಾಗೂ ಅಂತಿಮವಾಗಿ ಒಂದು ಹಣ್ಣು ತಿನ್ನುತ್ತಿದ್ದರು. ಆಮ್ಲೆಟ್ ಹರಿದಿದ್ದರೆ, ಅದನ್ನು ಅವರು ತಿರಸ್ಕರಿಸುತ್ತಿದ್ದರು ಎಂದು ಪುಸ್ತಕ ಹೇಳಿದೆ.

ಈ ಕಾವಲುಗಾರರ ಪೈಕಿ ಹಲವರು ಮಕ್ಕಳನ್ನು ಹೊಂದಿದ್ದರು. ಸದ್ದಾಂ ಅವರಿಗೆ ಮಕ್ಕಳಿಗೆ ಹೇಳುವ ಕತೆಗಳನ್ನು ಹೇಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News