ಟ್ರಂಪ್-ರಶ್ಯ ನಂಟಿನ ತನಿಖೆ ಮಾಡಿ
ವಾಶಿಂಗ್ಟನ್, ಜೂ. 4: ರಶ್ಯ ಸರಕಾರದೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಂದಿರಬಹುದಾದ ಸಂಭಾವ್ಯ ನಂಟಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಅಮೆರಿಕದ ಪ್ರಮುಖ ನಗರಗಳಲ್ಲಿ ನೂರಾರು ಮಂದಿ ಶನಿವಾರ ಮೆರವಣಿಗೆಗಳನ್ನು ನಡೆಸಿದರು.
‘ಸತ್ಯಕ್ಕಾಗಿ ಮೆರವಣಿಗೆ’ಗೆ ಕಾಂಗ್ರೆಸ್ ಸದಸ್ಯರು, ನಟರು ಮತ್ತು ದೇಶಾದ್ಯಂತದ ಪ್ರಗತಿಪರ ಗುಂಪುಗಳು ಬೆಂಬಲ ನೀಡಿದವು.
ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಸೋಲಿಸಲು ಟ್ರಂಪ್ ತಂಡ ಮತ್ತು ರಶ್ಯ ಶಾಮೀಲಾದ ಆರೋಪಗಳ ಬಗ್ಗೆ ಗಂಭೀರ ತನಿಖೆ ನಡೆಯಲು ಒತ್ತಡ ಹೇರುವುದು ಪ್ರತಿಭಟನಾ ಮೆರವಣಿಗೆಯ ಉದ್ದೇಶವಾಗಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯ ಮೇಲೆ ಪ್ರಭಾವ ಬೀರಲು ರಶ್ಯ ಹೂಡಿದ ಸಂಭಾವ್ಯ ಸಂಚಿನ ಕುರಿತ ತನಿಖೆಯನ್ನು ವಿಫಲಗೊಳಿಸಲು ಪ್ರಯತ್ನಗಳನ್ನು ನಡೆಸುತ್ತಿರುವುದಕ್ಕಾಗಿ ಟ್ರಂಪ್‌ರನ್ನು ದೋಷಾರೋಪಣೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.