ಯಮನ್‌ನಲ್ಲಿ ಹರಡುತ್ತಿರುವ ಕಾಲರಾ:ಯುನಿಸೆಫ್ ಎಚ್ಚರಿಕೆ
Update: 2017-06-04 21:01 IST
ಅಮ್ಮಾನ್ (ಜೋರ್ಡಾನ್), ಜೂ. 4: ಯುದ್ಧಗ್ರಸ್ತ ಯಮನ್‌ನಲ್ಲಿ ಕಾಲರಾ ರೋಗ ವೇಗವಾಗಿ ಹರಡುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯನಿಸೆಫ್ ಶನಿವಾರ ಹೇಳಿದೆ.
ಪ್ರತಿದಿನ 3,000ದಿಂದ 5,000 ಹೊಸ ಕಾಲರಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅದು ತಿಳಿಸಿದೆ.
ಯಮನ್‌ನ 22 ರಾಜ್ಯಗಳ ಪೈಕಿ 19ರಲ್ಲಿ ಕಳೆದ ತಿಂಗಳು 70,000 ಕಾಲರಾ ಪ್ರಕರಣಗಳು ವರದಿಯಾಗಿವೆ ಎಂದು ಯುನಿಸೆಫ್‌ನ ಮಧ್ಯಪ್ರಾಚ್ಯ ನಿರ್ದೇಶಕ ಗೀರ್ಟ್ ಕ್ಯಾಪಲೇರ್ ‘ಅಸೋಸಿಯೇಟಡ್ ಪ್ರೆಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕಾಲರಾ ಪ್ರಕರಣಗಳು ಪ್ರತಿ ವಾರ ದುಪ್ಪಟ್ಟುಗೊಳ್ಳುವ ಸಾಧ್ಯತೆ ಎಂದು ಹೇಳಿದ ಅವರು, ಹೆಚ್ಚಿನ ನೆರವು ಲಭಿಸದಿದ್ದರೆ ಈಗಿನ 1.3 ಲಕ್ಷ ಪ್ರಕರಣಗಳು 3 ಲಕ್ಷ ಪ್ರಕರಣಗಳಾಗಬಹುದು ಎಂದು ಎಚ್ಚರಿಸಿದರು.