×
Ad

ಯುದ್ಧಭೂಮಿಯಲ್ಲೂ ಮಹಿಳಾ ಯೋಧರಿಗೆ ಅವಕಾಶ: ಜ. ರಾವತ್

Update: 2017-06-04 21:18 IST

  ಹೊಸದಿಲ್ಲಿ,ಜೂ.4: ಮಹಿಳಾ ಸೈನಿಕರಿಗೆ ಯುದ್ಧಭೂಮಿಯಲ್ಲಿಯೂ ಪಾಲ್ಗೊಳ್ಳುವ ಅವಕಾಶವನ್ನು ನೀಡಲು ನಿರ್ಧರಿಸುವ ಮೂಲಕ ಭಾರತೀಯ ಸೇನೆಯು ಮಹತ್ವದ ಪರಿವರ್ತನೆಯ ಹಾದಿಯಲ್ಲಿ ಸಾಗಲು ಸಜ್ಜಾಗಿದೆ. ಇದರೊಂದಿಗೆ, ಸೇನೆಯಲ್ಲಿ ಲಿಂಗಭೇದವನ್ನು ತೊಡೆದುಹಾಕಿದ ರಾಷ್ಟ್ರಗಳ ಸಾಲಿಗೆ ಭಾರತ ಕೂಡಾ ಸೇರ್ಪಡೆಗೊಳ್ಳುವ ಕಾಲ ಸನ್ನಿಹಿತವಾಗಿದೆ.

 ಯುದ್ಧಭೂಮಿಯಲ್ಲಿಯೂ ಮಹಿಳೆಯರಿಗೆ ಪಾತ್ರ ನೀಡುವುದಕ್ಕಾಗಿ ಸೇನೆಗೆ ಮಹಿಳೆಯರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ರವಿವಾರ ತಿಳಿಸಿದ್ದಾರೆ. ಪ್ರಾರಂಭದಲ್ಲಿ ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ನೇಮಕಗೊಳಿಸಲಾಗುವುದು ಎಂದವರು ಹೇಳಿದ್ದಾರೆ.

  ‘‘ಮಹಿಳೆಯರು ‘ಜವಾನ’ (ಯೋಧ) ರಾಗಿ ಸೇನೆಗೆ ಸೇರ್ಪಡೆಗೊಳ್ಳುವುದನ್ನು ನಾನು ಕಾಣಲಿಚ್ಛಿಸುತ್ತೇನೆ. ಆ ಪ್ರಕ್ರಿಯೆಯನ್ನು ನಾನು ಸದ್ಯದಲ್ಲೇ ಆರಂಭಿಸಲಿದ್ದೇನೆ. ಆರಂಭದಲ್ಲಿ ಮಿಲಿಟರಿ ಪೊಲೀಸ್ ಹುದ್ದೆಗಳಿಗೆ ಮಹಿಳೆಯರನ್ನು ಜವಾನರಾಗಿ ಸೇರ್ಪಡೆಗೊಳಿಸಲಿದ್ದೇವೆ ಎಂದವರು ಹೇಳಿದರು.
   ಪ್ರಸ್ತುತ ಸೇನೆಯಲ್ಲಿ ವೈದ್ಯಕೀಯ, ಕಾನೂನು, ಶಿಕ್ಷಣ, ಸಿಗ್ನಲ್ ಹಾಗೂ ಎಂಜಿನಿಯರಿಂಗ್ ದಳಗಳು ಸೇರಿದಂತೆ ಆಯ್ದ ವಿಭಾಗಗಳಿಗೆ ಮಾತ್ರ ಮಹಿಳೆಯರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಆದರೆ ವ್ಯೆಹಾತ್ಮಕವಾದ ಕಾರಣದಿಂದಾಗಿ ಮಹಿಳೆಯರಿಗೆ ಕದನದಲ್ಲಿ ಪಾಲ್ಗೊಳ್ಳುವ ಹುದ್ದೆಗಳನ್ನು ನೀಡಲಾಗುತ್ತಿಲ್ಲ. ಮಹಿಳೆಯರನ್ನು ಜವಾನರಾಗಿ ನೇಮಕಗೊಳಿಸಲು ತಾನು ಸಿದ್ಧನಿದ್ದು, ಈ ಬಗ್ಗೆ ಕೇಂದ್ರ ಸರಕಾರದ ಜೊತೆ ಚರ್ಚಿಸುತ್ತಿರುವುದಾಗಿ ಅವರು ಹೇಳಿದರು. ಈ ಕುರಿತು ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿರುವುದಗಿಯ ರಾವತ್ ಹೇಳಿದರು.

ಪ್ರಸ್ತುತ ಜರ್ಮನಿ, ಆಸ್ಟ್ರೇಲಿಯಾ, ಕೆನಡ,ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಹಾಗೂ ಇಸ್ರೇಲ್ ದೇಶಗಳು ಮಾತ್ರ ಕದನದಲ್ಲಿ ಪಾಲ್ಗೊಳ್ಳುವಂತಹ ಸೈನಿಕ ಹುದ್ದೆಗಳಿಗೆ ಮಹಿಳೆಯರಿಗೆ ನೇಮಕಗೊಳಿಸುತ್ತಿವೆ.

 ಸೇನಾದಂಡುಪ್ರದೇಶಗಳ ಕಾವಲು, ಸೈನಿಕರಿಂದ ನಿಯಮಗಳ ಉಲ್ಲಂಘನೆ, ಯುದ್ಧ ಹಾಗೂ ಶಾಂತಿಯ ಸನ್ನಿವೇಶಗಳಲ್ಲಿ ಯೋಧರ ಚಲನವಲನಗಳನ್ನು ನಿಯಂತ್ರಿಸುವುದು, ಯುದ್ಧ ಕೈದಿಗಳನ್ನು ನಿಭಾಯಿಸುವುದು ಹಾಗೂ ಅಗತ್ಯಬಿದ್ದಾಗ ನಾಗರಿಕ ಪೊಲೀಸರಿಗೆ ನೆರವು ನೀಡುವುದು ಮಿಲಿಟರಿ ಪೊಲೀಸರ ಕರ್ತವ್ಯಗಳಾಗಿವೆ.

ಭಾರತೀಯ ವಾಯುಪಡೆಯು ಕಳೆದ ವರ್ಷ ಮೂವರು ಮಹಿಳೆಯರನ್ನು ಯುದ್ಧವಿಮಾನಗಳ ಪೈಲಟ್‌ಗಳಾಗಿ ಸೇರ್ಪಡೆಗೊಳಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಭಾರತೀಯ ನೌಕಾಪಡೆಯು ಕೂಡಾ ಯುದ್ಧನೌಕೆಗಳಲ್ಲಿ ಮಹಿಳೆಯರನ್ನು ನಿಯೋಜಿಸುವ ಬಗ್ಗೆ ಚಿಂತಿಸುತ್ತಿದೆ.

 ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ: ಭಾರತೀಯ ಖಾಸಗಿ ಕಂಪೆನಿಗಳ ಪಾಲುದಾರಿಕೆಗೆ ರಾವತ್ ಗ್ರೀನ್ ಸಿಗ್ನಲ್

ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯಲ್ಲಿ ಪ್ರತಿಷ್ಠಿತ ಖಾಸಗಿ ಕಂಪೆನಿಗಳಿಗೆ ಪಾಲುದಾರಿಕೆ ನೀಡುವ ಕೇಂದ್ರ ಸರಕಾರದ ಚಿಂತನೆಗೆ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಸಮ್ಮತಿ ವ್ಯಕ್ತಪಡಿಸಿದ್ದು, ಭಾರತದ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಇದು ಹೆಬ್ಬಾಗಿಲನ್ನು ತೆರೆಯಲಿದೆಯೆಂದು ಹೇಳಿದ್ದಾರೆ. ಖಾಸಗಿ ಕಂಪೆನಿಗಳ ಪಾಲುದಾರಿಕೆಯಿಂದಾಗಿ, ನೂತನ ತಂತ್ರಜ್ಞಾನಗಳು ಸೇನೆಗೆ ದೊರೆಯಲಿದ್ದು, ಪ್ರಮುಖ ಮಿಲಿಟರಿ ಉತ್ಪಾದನಾ ಯೋಜನೆಗಳನ್ನು ಜಾರಿಗೊಳಿಸಲು ನೆರವಾಗಲಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.

 ನೂತನ ಯೋಜನೆಯಡಿ, ಕೇಂದ್ರ ಸರಕಾರವು ಭಾರತೀಯ ಕಂಪೆನಿಗಳು ವಿದೇಶಿ ರಕ್ಷಣೋತ್ಪಾದನಾ ಸಂಸ್ಥೆಗಳು ಸಹಯೋಗದೊಂದಿಗೆ ಫೈಟರ್ ವಿಮಾನಗಳು, ಹೆಲಿಕಾಪ್ಟರ್‌ಗಳು, ಸಬ್‌ಮೆರೈನ್‌ಗಳು ಹಾಗೂ ಸಮರ ಟ್ಯಾಂಕ್‌ಗಳ ಉತ್ಪಾದನೆಗೆ ಅವಕಾಶ ನೀಡಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News