‘ಭವಿಷ್ಯ ನಿಧಿ ಚಲೋ’ ಪ್ರತಿಭಟನಾ ಪ್ರದರ್ಶನ

Update: 2017-06-06 12:54 GMT

ಉಡುಪಿ, ಜೂ. 5: ಕಾರ್ಮಿಕ ಭವಿಷ್ಯನಿಧಿ ಸಂಘಟನೆಯ ವಿಳಂಬ ನೀತಿ, ಏಕಪಕ್ಷೀಯ, ಅವಸರದ ಕಾರ್ಯಯೋಜನೆಗಳ ವಿರುದ್ಧ ಮತ್ತು 6000 ರೂ. ಮಾಸಿಕ ಪಿಂಚಣಿಗೆ ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ‘ಭವಿಷ್ಯ ನಿಧಿ ಚಲೋ’ ಪ್ರತಿಭಟನಾ ಪ್ರದರ್ಶನವನ್ನು ಉಡುಪಿಯ ಕಾರ್ಮಿಕ ಭವಿಷ್ಯ ನಿಧಿ ಕಚೇರಿ ಎದುರು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಡೆಗಣಿಸಿ ಭವಿಷ್ಯನಿಧಿ, ಪಿಂಚಣಿ ಮತ್ತಿತ್ತರ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ ಗೊಳಿಸಿ ಅರ್ಜಿದಾರರನ್ನು ವಂಚಿಸುತ್ತಿರುವುದು ಮತ್ತು ವ್ಯತ್ಯಾಸವಾದ ಜನನ ದಿನಾಂಕವನ್ನು ಸರಿಪಡಿಸ ಬೇಕೆಂಬ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸುತ್ತಿರುವುದನ್ನು ನಿಲ್ಲಿಸಬೇಕು. ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡದಿರುವ ಏಕಾಧಿಪತ್ಯ ನಿಲ್ಲಬೇಕು ಎಂದು ಎಐಟಿಯುಸಿ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ವಿ.ಭಟ್ ಆಗ್ರಹಿಸಿದರು.

ಪ್ರಸ್ತುತ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಸರಿದೂಗಿಸಲು, ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕನಿಷ್ಠ 6 ಸಾವಿರ ರೂ. ಮಾಸಿಕ ಪಿಂಚಣಿ ನೀಡ ಬೇಕು ಹಾಗೂ ತುಟ್ಟಿಭತ್ತೆಗೆ ಅನುಸಾರವಾಗಿ ಪಿಂಚಣಿ ಏರಿಕೆ ಮಾಡಬೇಕು. ಪಿಂಚಣಿ ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ನಿಲ್ಲಿಸಿ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್, ಉಪಾಧ್ಯಕ್ಷ ಬಿ.ಶೇಖರ್, ಉಡುಪಿ ತಾಲೂಕು ಬೀಡಿ ವರ್ಕರ್ ಯೂನಿಯನ್‌ನ ಕಾರ್ಯದರ್ಶಿ ಶಶಿಕಲಾ ಗಿರೀಶ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಮುಖಂಡರಾದ ವಿ.ಎಸ್.ಬೇರಿಂಜ, ಸುರೇಶ್ ಕುಮಾರ್, ತಿಮ್ಮಪ್ಪ ಕಾವೂರು, ಬಾಬು ಭಂಡಾರಿ, ಭಾರತಿ, ಸರಸ್ವತಿ, ಶಾಂತ ನಾಯಕ್, ರಾಮ ಮೂಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News