ವಿಜಯಾ ಬ್ಯಾಂಕ್‌ನಿಂದ ಬಡ ವಿದ್ಯಾರ್ಥಿನಿಯ ದತ್ತು ಸ್ವೀಕಾರ

Update: 2017-06-06 16:19 GMT

ಉಡುಪಿ, ಜೂ.6: ಬಡ ಕೂಲಿ ಕಾರ್ಮಿಕಳ ಮಗಳಾಗಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 94.2ಶೇ. ಅಂಕಗಳನ್ನು ಪಡೆದು ಉತ್ತೀರ್ಣಳಾದ ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೌಮ್ಯಗಳನ್ನು ದತ್ತು ಸ್ವೀಕರಿಸಿರುವ ವಿಜಯಾ ಬ್ಯಾಂಕ್‌ನ ಉಡುಪಿ ಕ್ಷೇತ್ರೀಯ ಕಚೇರಿ, ಆಕೆಯ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ( ಸಿಎಸ್‌ಆರ್) ನಿಧಿಯಡಿ ಸೌಮ್ಯ ಅವರನ್ನು ಬ್ಯಾಂಕ್ ದತ್ತು ಸ್ವೀಕರಿಸಿದೆ. ಬಡ ಕೂಲಿ ಕಾರ್ಮಿಕಳಾಗಿ ತಿಂಗಳಿಗೆ 6,000ರೂ. ದುಡಿಯುವ ವಿಜಯ ಅವರ ಮಗಳಾದ ಸೌಮ್ಯ, ಕಷ್ಟಪಟ್ಟು ಕಲಿತು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಪತ್ರಿಕಾ ವರದಿಗಳನ್ನು ನೋಡಿ ನಾವೇ ಆಕೆಯನ್ನು ದತ್ತು ಸ್ವೀಕರಿಸಲು ಮುಂದೆ ಬಂದಿದ್ದೇವೆ ಎಂದು ವಲಯ ಕಚೇರಿಯ ಡಿಜಿಎಂ ಎಂ.ಜೆ.ನಾಗರಾಜ್ ನುಡಿದರು.

ಉಡುಪಿ ವಲಯದಲ್ಲಿ ನಾವು ಈ ವರ್ಷ ದತ್ತು ಸ್ವೀಕರಿಸುತ್ತಿರುವ 10ನೇ ವಿದ್ಯಾರ್ಥಿನಿ ಇವರಾಗಿದ್ದಾರೆ. ಕಳೆದ ವರ್ಷ ಒಟ್ಟು 64 ಮಂದಿ ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ. ಒಟ್ಟಾರೆಯಾಗಿ 74 ಮಂದಿ ಬಡ ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸಿದ್ದು, ಅವರಿಗೆ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾಭ್ಯಾಸಕ್ಕೆ ನೆರವು ನೀಡಲಿದ್ದೇವೆ ಎಂದರು.

ಒಂದನೇ ತರಗತಿಯಿಂದಲೇ ಬ್ಯಾಂಕ್ ಬಡ ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸುತ್ತದೆ. ಎಸೆಸೆಲ್ಸಿಯವರೆಗೆ ಪ್ರತಿ ವರ್ಷ 5,000ರೂ.ಗಳನ್ನು ನೀಡಲಾಗುವುದು. ಪದವಿಯ ಮೂರು ವರ್ಷಗಳಲ್ಲಿ ವರ್ಷಕ್ಕೆ 10,000ರೂ. ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವರ್ಷಕ್ಕೆ 20,000ರೂ. ನಿಧಿಯನ್ನು ನೀಡಲಾಗುತ್ತದೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಮೊತ್ತವನ್ನು ನೀಡಬಹುದಾಗಿದೆ ಎಂದು ನಾಗರಾಜ್ ತಿಳಿಸಿದರು.

ಸೌಮ್ಯರನ್ನು ಈ ವರ್ಷ ದತ್ತು ಸ್ವೀಕರಿಸಿದ್ದರೂ, ಎಸೆಸೆಲ್ಸಿಯ ಬಾಬ್ತು 5,000ರೂ.ಗಳ ಡಿಡಿಯನ್ನು ನಾಗರಾಜ್ ತಾಯಿ-ಮಗಳಿಗೆ ಹಸ್ತಾಂತರಿಸಿದರು. ಜುಲೈಯಲ್ಲಿ ಈ ವರ್ಷದ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮಾಗೊಳ್ಳಲಿದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News