ಬೊಳಿಕಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ, ಮಾಹಿತಿ ಕಾರ್ಯಕ್ರಮ

Update: 2017-06-06 17:56 GMT

ಪುತ್ತೂರು, ಜೂ.6: ಪರಿಸರ ನಾಶದ ಪರಿಣಾಮವನ್ನು ಈ ವರ್ಷ ಪ್ರತಿಯೊಬ್ಬರು ಅರಿತುಕೊಂಡಿದ್ದಾರೆ. ನೀರಿನ ಅಭಾವ, ವಿಪರೀತ ಸೆಖೆ, ಹವಾಮಾನದಲ್ಲಿ ಉಂಟಾಗುವ ವೈಪರಿತ್ಯ ಇದೆಲ್ಲವನ್ನು ನಾವು ಅನುಭವಿಸುತ್ತಿದ್ದೇವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗಂತ ಕೇವಲ ಗಿಡ ನೆಟ್ಟರೆ ಸಾಲದು, ನೆಟ್ಟ ಗಿಡವನ್ನು ರಕ್ಷಣೆ ಮಾಡಿ ಪೋಷಿಸಿ ಬೆಳೆಸುವ ಜವಬ್ದಾರಿ ಮತ್ತು ಪ್ರೀತಿ ನಮ್ಮಲ್ಲಿ ಬೆಳೆಯಬೇಕಾಗಿದೆ ಎಂದು ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೆಯ್ಯೂರು ಗ್ರಾಮ ಪಂ. ಮತ್ತು ಎಸ್.ಡಿ.ಎಂ.ಸಿ ಬೊಳಿಕಲ ಶಾಲೆ ಇದರ ವತಿಯಿಂದ ಬೊಳಿಕಲ ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪರಿಸರ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದ ಕೆಯ್ಯೂರು ಪ್ರೌಢ ಶಾಲಾ ಮುಖ್ಯಗುರು ವಿನೋದ್ ಕುಮಾರ್ ಕೆ.ಎಸ್ ಅವರು ಪರಿಸರದ ಬಗ್ಗೆ ನಮ್ಮಲ್ಲಿ ಜಾಗೃತಿ ಮತ್ತು ಪ್ರೀತಿ ಇರಬೇಕಾದ್ದು ಅತೀ ಅಗತ್ಯ. ಪರಿಸರಕ್ಕೆ ಹಾನಿಯಾಗುವಂತಹ ಕೆಲಸಗಳನ್ನು ಆದಷ್ಟು ಕಡಿಮೆ ಮಾಡಬೇಕು.

ಪರಿಸರದಲ್ಲಿನ ಮರಗಿಡಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಮಳೆ ಕಡಿಮೆಯಾಗುತ್ತಿದೆ ಇದರ ಪರಿಣಾಮ ಅಂತರ್‌ ಜಲ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಪಾಯ ಕಾದಿದೆ. ಆದ್ದರಿಂದ ನಾವೆಲ್ಲರೂ ಮಕ್ಕಳಿಗೆ ಪರಿಸರ ಉಳಿಸಿ ಬೆಳೆಸುವ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಹೇಳಿದರು.

ಕೆಯ್ಯೂರು ಕೆದಂಬಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಶಶಿಧರ ರಾವ್ ಮಾತನಾಡಿ ಮರ ಕಡಿಯುವುದು ಇಂದಿನ ಫ್ಯಾಷನ್ ಆಗಿದೆ. ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ ಆದ್ದರಿಂದ ಪರಿಸರ ಸಂರಕ್ಷಣೆ ಅತೀ ಅಗತ್ಯವಾಗಿದೆ ಎಂದು ಹೇಳಿದರು.

ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು.ಬಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ಶಶಿಕಲಾ, ಕೆಯ್ಯೂರು ಗ್ರಾ.ಪಂ ಸದಸ್ಯರುಗಳಾದ ಎ.ಕೆ ಜಯರಾಮ ರೈ, ಕಿಟ್ಟ ಅಜಿಲ ಕಣಿಯಾರು, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಕಾಶ್ ಉಪಸ್ಥಿತರಿದ್ದರು.

ಗ್ರಾ.ಪಂ ಅಭಿವೃದ್ಧಿ ಅಕಾರಿ ಸುಬ್ರಹ್ಮಣ್ಯ ಕೆ.ಎಂ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳಾದ ರಾಕೇಶ್, ಶಿವಪ್ರಸಾದ್, , ಶಿಕ್ಷಕರುಗಳಾದ ನೇತ್ರಾವತಿ, ವತ್ಸಾಲಾ, ಆಶಾ, ದಿವ್ಯ, ಗೌರವ ಶಿಕ್ಷಕ ಪದ್ಮಯ್ಯ ಸಹಕರಿಸಿದ್ದರು. ಪಂಚಾಯತ್ ಸದಸ್ಯರುಗಳಾದ ಹರಿಣಾಕ್ಷಿ, ಲಾವಣ್ಯ ಸಿ.ರೈ ಸೇರಿದಂತೆ ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶೋಧಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಈಶ್ವರ್ ಕುಲಾಲ್, ಕೇಶವ ಪೂಜಾರಿ ಹಾಗೂ ಸದಸ್ಯರುಗಳು, ಫೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News