ಮಂದಸೌರ್: ಗೋಲೀಬಾರ್ ಖಂಡಿಸಿ ಬಂದ್ ಆಚರಣೆ ವ್ಯಾಪಕ ಹಿಂಸಾಚಾರ; ಡಿಸಿ, ಎಸ್‌ಪಿಗೆ ರೈತರ ಮುತ್ತಿಗೆ
ಮಂದಸೌರ್ (ಮ.ಪ್ರ), ಜೂ.7: ಮಂಗಳವಾರ ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ನಡೆಸಿದ ಗೋಲೀಬಾರಿಗೆ ಐವರು ರೈತರು ಬಲಿಯಾದ ಘಟನೆಯನ್ನು ಖಂಡಿಸಿ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಬುಧವಾರ ಬಂದ್ ಆಚರಿಸಲಾಗಿದ್ದು ಈ ವೇಳೆ ಹಲವೆಡೆ ಹಿಂಸಾಚಾರ ಸಂಭವಿಸಿದೆ.
ಅಲ್ಲದೆ ಪೊಲೀಸ್ ಗೋಲೀಬಾರಿಗೆ ಬಲಿಯಾದ ರೈತರ ಸಂಬಂಧಿಗಳು ಮಂದಸೌರ್ ಜಿಲ್ಲಾಧಿಕಾರಿ ಎಸ್.ಕೆ.ಸಿಂಗ್ ಅವರಿಗೆ ಮುತ್ತಿಗೆ ಹಾಕಿ ಎಳೆದಾಡಿದ್ದು ತಕ್ಷಣ ಪೊಲೀಸ್ ಭದ್ರತೆಯಲ್ಲಿ ಅವರನ್ನು ಸುರಕ್ಷಿತ ಸ್ಥಾನಕ್ಕೆ ಕರೆದೊಯ್ಯಲಾಯಿತು. ಬಳಿಕ ಪೊಲೀಸ್ ಅಧೀಕ್ಷಕ ಓಂಪ್ರಕಾಶ್ ತ್ರಿಪಾಠಿಯವರಿಗೂ ಮುತ್ತಿಗೆ ಹಾಕಿ ಎಳೆದಾಡಿದರು . ಅಲ್ಲದೆ ಪೊಲೀಸರತ್ತ ಕಲ್ಲೆಸೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗೋಲೀಬಾರ್‌ಗೆ ಬಲಿಯಾದ ರೈತರ ಸಂಬಂಧಿಗಳು ಬರ್ಖೆಡ ಪಂತ್ ಎಂಬಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರಲ್ಲದೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಮೃತಪಟ್ಟ ರೈತರ ಕುಟುಂಬವರ್ಗದವರನ್ನು ಭೇಟಿಯಾಗಲು ತೆರಳುತ್ತಿದ್ದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ರನ್ನು ಪ್ರತಿಭಟನಾಕಾರರು ತಡೆದರು.
ನೀಮುಚ್ ಜಿಲ್ಲೆಯ ಬೆಚಾರಿಕಾಕಲ್ ಎಂಬಲ್ಲಿರುವ ಪೊಲೀಸ್ ಹೊರಠಾಣೆಯೊಂದಕ್ಕೆ ಬೆಂಕಿಹಚ್ಚಿದರು. ಉಜ್ಜೈನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಐವರು ಪೊಲೀಸರು ಮತ್ತು ಮೂವರು ರೈತರು ಗಾಯಗೊಂಡರು.
ಉಜ್ಜೈನ್ ವಿಭಾಗದ ಐಜಿಪಿ ವಿ.ಮಧುಕುಮಾರ್ ಅವರು ಮಂದಸೌರ್ಗೆ ಭೇಟಿ ನೀಡಿದ್ದು ಕಾನೂನು ಸುವ್ಯವಸ್ಥೆಯ ನಿಗಾ ವಹಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಮತ್ತು ಕೃಷಿ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರಾಜ್ಯದಲ್ಲಿ ರೈತರು ಜೂನ್ 1ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.