ಬಿಹಾರದ 3500 ಸರಕಾರಿ ಶಾಲೆಗಳಲ್ಲಿ ಕೇವಲ ಏಳು ಭೌತಶಾಸ್ತ್ರ ಅಧ್ಯಾಪಕರು!
ಪಾಟ್ನಾ,ಜೂ.7: ಈ ವರ್ಷ ಬಿಹಾರದಲ್ಲಿ ಪ್ಲಸ್ ಟು ಅಥವಾ 12ನೇ ತರಗತಿಯ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಸುಮಾರು ಶೇ.70ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣ ಗೊಂಡಿದ್ದಾರೆ. ಇದಕ್ಕೆ ಕಾರಣವೇನಿರಬಹುದು...? ನಂಬಿದರೆ ನಂಬಿ... ಬಿಟ್ಟರೆ ಬಿಡಿ, ರಾಜ್ಯದಲ್ಲಿಯ 3500 ಸರಕಾರಿ ಶಾಲೆಗಳಲ್ಲಿ ಪ್ಲಸ್ ಟು ಮಟ್ಟದಲ್ಲಿ ಭೌತಶಾಸ್ತ್ರವನ್ನು ಕಲಿಸಲು ಇರುವುದು ಕೇವಲ ಏಳೇ ಶಿಕ್ಷಕರು...!
ಅಂದ ಹಾಗೆ ಈ ಎಲ್ಲ ಏಳೂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವುದು ಪಾಟ್ನಾದಲ್ಲಿ. ಅಂದರೆ ರಾಜ್ಯದ 38 ಜಿಲ್ಲೆಗಳ ಪೈಕಿ 37 ಜಿಲ್ಲೆಗಳಲ್ಲಿ ಪ್ಲಸ್ ಟು ವಿದ್ಯಾರ್ಥಿಗಳಿಗೆ ಭೌತಶಾಸ್ತ್ರವನ್ನು ಬೋಧಿಸಲು ಒಬ್ಬನೇ ಒಬ್ಬ ಅಧ್ಯಾಪಕನಿಲ್ಲ.
ಸ್ಥಳೀಯ ದೈನಿಕವೊಂದು ಪ್ರಕಟಿಸಿರುವ ಅಂಕಿಅಂಶಗಳಂತೆ ಈ ಸರಕಾರಿ ಶಾಲೆಗಳಲ್ಲಿ 205 ಜೀವಶಾಸ್ತ್ರ, 296 ರಸಾಯನಿಕ ಶಾಸ್ತ್ರ, 176 ಗಣಿತ ಮತ್ತು 876 ರಾಜಕೀಯ ವಿಜ್ಞಾನ ಶಿಕ್ಷಕರಿದ್ದಾರೆ, ಆದರೆ ಭೌತಶಾಸ್ತ್ರ ಶಿಕ್ಷಕರ ಸಂಖ್ಯೆ ಕೇವಲ ಏಳು.
ಈ ಏಳು ಶಿಕ್ಷಕರ ಪೈಕಿ ಮೂವರು ಮಾತ್ರ ನಿಯಮಿತ ಹುದ್ದೆಗಳಲ್ಲಿದ್ದರೆ, ಉಳಿದ ನಾಲ್ವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭೌತಶಾಸ್ತ್ರ ಅಧ್ಯಾಪಕರ ಹುದ್ದೆಗೆ ಯಾರೂ ಅರ್ಜಿ ಸಲ್ಲಿಸುತ್ತಿಲ್ಲ. ಈ ಅಧ್ಯಾಪಕರನ್ನು ತಯಾರು ಮಾಡುವ ವಿವಿಗಳೇ ದಯನೀಯ ಸ್ಥಿತಿಗಳಲ್ಲಿವೆ.
ಹೀಗಾಗಿ ಅಲ್ಲಿಂದ ಹೊರಬೀಳುವವರು ಪ್ರೌಢ ಶಿಕ್ಷಕರ ಅರ್ಹತಾ ಪರೀಕೆ ್ಷ(ಎಸ್‌ಟಿಇಟಿ)ಯಲ್ಲಿ ತೇರ್ಗಡೆಯಾಗುವ ಸಾಮರ್ಥ್ಯ ಹೊಂದಿರುವುದಿಲ್ಲ ಎಂದು ಶಿಕ್ಣಣ ತಜ್ಞರೋರ್ವರು ತಿಳಿಸಿದರು. ಅಭ್ಯರ್ಥಿಯೋರ್ವ ಶಿಕ್ಷಕನಾಗಿ ನೇಮಕಗೊಳ್ಳಲು ಎಸ್‌ಟಿಇಟಿಯಲ್ಲಿ ತೇರ್ಗಡೆಯಾಗುವುದು ಅಗತ್ಯವಾಗಿದೆ.
ಅಲ್ಲದೇ 2011ರಿಂದಲೂ ಬಿಹಾರದಲ್ಲಿ ಎಸ್‌ಟಿಇಟಿ ಪರೀಕ್ಷೆಗಳು ನಡೆದಿಲ್ಲ ಎನ್ನುವುದೂ ಅಧ್ಯಾಪಕರ ಕೊರತೆಗೆ ಕಾರಣವಾಗಿದೆ. 2011ರಲ್ಲಿ ಕೇವಲ ನಾಲ್ಕು ಅಭ್ಯರ್ಥಿಗಳು ಭೌತಶಾಸ್ತ್ರ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮೂವರನ್ನು 2012ರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದರೆ, ಇನೋರ್ವ ಅಭ್ಯರ್ಥಿಯನ್ನು 2017ರಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ಲಸ್ ಟು ಕೋರ್ಸ್‌ನ್ನು ಪೂರ್ಣಗೊಳಿಸಲು ಸರಕಾರವು ಪ್ರೌಢಶಾಲಾ ಶಿಕ್ಷಕರ ನೆರವು ಪಡೆದುಕೊಂಡಿತ್ತಾದರೂ ಅದು ತುಂಬ ವಿಳಂಬವಾಗಿತ್ತು ಮತ್ತು ಹೆಚ್ಚಿನ ಫಲವನ್ನು ನೀಡಲಿಲ್ಲ.