ಇರಾನ್ ಸಂಸತ್, ಖೊಮೈನಿ ಸಮಾಧಿ ಸ್ಥಳದ ಮೇಲೆ ಐಸಿಸ್ ಉಗ್ರರ ದಾಳಿ: 12 ಮಂದಿ ಸಾವು, 39 ಮಂದಿಗೆ ಗಾಯ

Update: 2017-06-07 15:42 GMT

ಟೆಹ್ರಾನ್, ಜೂ.7: ಇರಾನ್ ಸಂಸತ್ತಿಗೆ ಮತ್ತು ಕ್ರಾಂತಿಕಾರಿ ಮುಖಂಡ ಅಯಾತುಲ್ಲಾ ರೂಹುಲ್ಲಾ ಖೊಮೈನಿ ಸಮಾಧಿ ಸ್ಥಳಕ್ಕೆ ಏಕಕಾಲದಲ್ಲಿ ನುಗ್ಗಿದ ಬಂದೂಕುಧಾರಿಗಳು ಮತ್ತು ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ಸಂಘಟಿತ ದಾಳಿಯಲ್ಲಿ 12 ಮಂದಿ ಸಾವಿಗೀಡಾಗಿದ್ದು, 39ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಭಯೋತ್ಪಾದಕ ಗುಂಪು ಐಸಿಸ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

 ಸಂಸತ್ ಕಟ್ಟಡದೊಳಗೆ ನುಗ್ಗಿದ್ದ ಎಲ್ಲಾ ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸತ್ ಕಟ್ಟಡದೊಳಗೆ ಸಂಘಟನೆಯ ಸದಸ್ಯರು ನುಗ್ಗುತ್ತಿರುವ ದೃಶ್ಯಾವಳಿಯನ್ನು ‘ಅಮಾಕ್ ಸುದ್ದಿ ಸಂಸ್ಥೆ’ಯ ಮೂಲಕ ಐಸಿಸ್ ಬಿಡುಗಡೆ ಮಾಡಿದ್ದು, ದಾಳಿ ನಡೆಯುತ್ತಿರುವಾಗಲೇ ದಾಳಿಯ ಹೊಣೆ ಹೊತ್ತಿರುವ ಅಪರೂಪದ ಪ್ರಕರಣ ಇದಾಗಿದೆ. ದಾಳಿ ನಡೆಸಿದ ಎಲ್ಲಾ ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

    ಟೆಹ್ರಾನ್ ನಗರದ ನಡುವೆ ಇರುವ ಸಂಸತ್ ಕಟ್ಟಡದ ಸಂಕೀರ್ಣದೊಳಗೆ ಬುಧವಾರ ಬೆಳಿಗ್ಗೆ ನಾಲ್ವರು ಬಂದೂಕುಧಾರಿಗಳು ನುಗ್ಗಿದ್ದು ಓರ್ವ ಭದ್ರತಾ ಸಿಬ್ಬಂದಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಗುಂಡಿಟ್ಟು ಕೊಂದರು ಎಂದು ಐಎಸ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಿಳೆಯರಂತೆ ದಿರಿಸು ತೊಟ್ಟಿದ್ದ ಉಗ್ರರು ಸಂದರ್ಶಕರ ಗೇಟಿನ ಮೂಲಕ ಒಳ ನುಸುಳಿದರು. ಇದೇ ವೇಳೆ ಸುಮಾರು ನಾಲ್ಕು ಮಂದಿಯಿದ್ದ ತಂಡವೊಂದು ದಕ್ಷಿಣ ಟೆಹರಾನ್‌ನಲ್ಲಿರುವ ಇರಾನ್‌ನ ಕ್ರಾಂತಿಪುರುಷ ಅಯಾತುಲ್ಲಾ ರೂಹುಲ್ಲಾ ಖೊಮೈನಿ ಅವರ ಸಮಾಧಿ ಸ್ಥಳಕ್ಕೆ ನುಗ್ಗಿ ಅಲ್ಲಿದ್ದ ಸಿಬ್ಬಂದಿಯನ್ನು ಗುಂಡಿಟ್ಟು ಸಾಯಿಸಿತು .

ಈ ವೇಳೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡರು. ಸಮಾಧಿಗೆ ನುಗ್ಗಿದವರಲ್ಲಿ ಓರ್ವ ಮಹಿಳೆಯೂ ಸೇರಿ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡರು. ಸಂಸತ್ ಕಟ್ಟಡದೊಳಗೆ ನುಗ್ಗಿದ್ದ ಉಗ್ರರಲ್ಲಿ ಓರ್ವ ನಾಲ್ಕನೇ ಮಹಡಿಯಲ್ಲಿ ತನ್ನನ್ನು ಸ್ಫೋಟಿಸಿಕೊಂಡ. ಎರಡು ಪ್ರಕರಣಗಳಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದು 39ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಇರಾನಿನ ತುರ್ತು ಸೇವಾ ತಂಡ ತಿಳಿಸಿದೆ.

 ಭಯೋತ್ಪಾದಕರ ಮೂರನೇ ತಂಡವನ್ನು ದಾಳಿ ಆರಂಭವಾಗುವ ಮುನ್ನವೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ಗುಪ್ತಚಾರ ಇಲಾಖೆಯ ಪ್ರಕಟಣೆ ತಿಳಿಸಿದೆ. ನಗರದಲ್ಲಿ ಭಾರೀ ಭದ್ರತೆ ವ್ಯವಸ್ಥೆಗೊಳಿಸಲಾಗಿದ್ದು ರಸ್ತೆ ಸಂಚಾರವನ್ನು ತಡೆಹಿಡಿಯಲಾಗಿದೆ. ಪತ್ರಕರ್ತರನ್ನು ಸಮಾಧಿ ಸ್ಥಳಕ್ಕೆ ಭೇಟಿ ನೀಡದಂತೆ ಪೊಲೀಸರು ತಡೆದರು.

 ಕಟ್ಟಡದ ಕಿಟಕಿಗಳ ಮೂಲಕ ಸಂಸತ್ ಭವನದ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಹೊರ ಸಾಗಿಸಲು ಪೊಲೀಸರು ಯತ್ನಿಸುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೇಳೆ ಕಟ್ಟಡದ ಹೊರಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.

ಉಗ್ರರ ಆಕ್ರಮಣ ಸಂದರ್ಭ ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು , ಸಂಸತ್ ಸದಸ್ಯರು ಉಗ್ರರ ಆಕ್ರಮಣದ ಘಟನೆಯಿಂದ ವಿಚಲಿತರಾಗದೆ ಸಂಸತ್ ಕಲಾಪ ಸುಸೂತ್ರವಾಗಿ ನಡೆಯಿತು. ಸಮೀಪದ ಕಟ್ಟಡದಿಂದ ಗುಂಡಿನ ದಾಳಿ ಕೇಳಿ ಬರುತ್ತಿದ್ದರೂ ಕೆಲವು ಸಂಸತ್ ಸದಸ್ಯರು ಶಾಂತಚಿತ್ತರಾಗಿ ಸೆಲ್ಫಿ ತೆಗೆದುಕೊಂಡ ಘಟನೆಯೂ ನಡೆಯಿತು. ಸಂಸತ್ ಭವನದ ಮೇಲೆ ದಾಳಿ ನಡೆದಿರುವುದನ್ನು ನಿರಾಕರಿಸಿರುವ ಸ್ಪೀಕರ್ ಅಲಿ ಲರಿಜನಿ , ಇದೊಂದು ಕ್ಷುಲ್ಲಕ ಘಟನೆ. ಇದನ್ನು ಭದ್ರತಾ ಪಡೆಗಳು ನಿಭಾಯಿಸುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಐಸಿಸ್ ಉಗ್ರರ ವಿರುದ್ಧ ಹೋರಾಡುತ್ತಿರುವ ಇರಾಕ್ ಮತ್ತು ಸಿರಿಯಾಗಳಿಗೆ ಇರಾನ್ ನೆರವಾಗುತ್ತಿದ್ದು, ಈ ಎರಡು ದೇಶಗಳಲ್ಲಿ ಐಸಿಸ್ ತನ್ನ ಬಹುತೇಕ ನೆಲೆಗಳನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News