ಆಹಾರಕ್ಕಾಗಿ ಇರಾನ್ ಟರ್ಕಿ ಜೊತೆ ಕತರ್ ಮಾತುಕತೆ

Update: 2017-06-07 14:33 GMT

ದೋಹಾ, ಜೂ. 7: ತನ್ನ ಆಹಾರ ಮತ್ತು ನೀರಿನ ಪೂರೈಕೆಗಳನ್ನು ಖಾತರಿಪಡಿಸಲು ಇರಾನ್ ಮತ್ತು ಟರ್ಕಿಗಳೊಂದಿಗೆ ಕತರ್ ಮಾತುಕತೆಯಲ್ಲಿ ತೊಡಗಿದೆ. ಅದರ ಈ ಪ್ರಾಥಮಿಕ ಅವಶ್ಯಕತೆಗಳ ಅತಿ ದೊಡ್ಡ ಪೂರೈಕೆದಾರರಾದ ಯುಎಇ ಮತ್ತು ಸೌದಿ ಅರೇಬಿಯಗಳು ಸೋಮವಾರ ಅದರೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದ್ದವು.

‘‘ನಾವು ಟರ್ಕಿ, ಇರಾನ್ ಮತ್ತು ಇತರ ದೇಶಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದೇವೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆಹಾರ ಪೂರೈಕೆಗಳನ್ನು ಕತರ್ ಏರ್‌ವೇಸ್‌ನ ಸರಕು ವಿಮಾನಗಳ ಮೂಲಕ ತರಲಾಗುವುದು’’ ಎಂದು ಅವರು ಹೇಳಿದರು.

ಕತರ್‌ನ ಮಾರುಕಟ್ಟೆಯಲ್ಲಿ ನಾಲ್ಕು ವಾರಗಳಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳಿವೆ ಎಂದರು.

ಕತರ್ ಜನಜೀವನದ ಮೇಲೆ ಭಾರೀ ಪರಿಣಾಮ

ಅರಬ್ ಜಗತ್ತಿನಲ್ಲಿ ಎದ್ದಿರುವ ಈ ಅಭೂತಪೂರ್ವ ಬಿಕ್ಕಟ್ಟು ಕತರ್‌ನ ಸಾಮಾನ್ಯ ಜನಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಕತರ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಸೌದಿ ಅರೇಬಿಯ, ಯುಎಇ, ಈಜಿಪ್ಟ್, ಬಹರೈನ್, ಯಮನ್ ಮತ್ತು ಇತರ ಹಲವು ಅರಬ್ ದೇಶಗಳು ಕಡಿದುಕೊಂಡಿರುವುದು ಈಗಾಗಲೇ ಲಕ್ಷಾಂತರ ಕತರ್ ನಿವಾಸಿಗಳ ಮೇಲೆ ಪರಿಣಾಮ ಬೀರಿದೆ.

ಈ ದೇಶಗಳು ಕತರ್‌ನೊಂದಿಗಿನ ನೆಲ, ಸಮುದ್ರ ಮತ್ತು ವಾಯು ಸಂಪರ್ಕಗಳನ್ನು ಕಡಿದುಕೊಂಡಿವೆ.

‘‘ಇಲ್ಲಿನ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನನಗೆ ಇಲ್ಲಿ ಜವಾಬ್ದಾರಿಗಳಿವೆ ಹಾಗೂ ಅಂತಿಮ ಪರೀಕ್ಷೆಗಳು ನಡೆಯುತ್ತಿವೆ’’ ಎಂದು ಕತರ್ ವಿಶ್ವವಿದ್ಯಾನಿಲಯದಲ್ಲಿ ಕೊಲ್ಲಿ ವ್ಯವಹಾರಗಳು ಮತ್ತು ಮಹಿಳಾ ಅಧ್ಯಯನಗಳ ಶಿಕ್ಷಕಿ ಪ್ರೊಫೆಸರ್ ಅಲ್-ಫಸಿ ಹೇಳುತ್ತಾರೆ.

ಸೌದಿ ದೊರೆ ಜೊತೆ ಕುವೈತ್ ಆಮಿರ್ ಮಾತುಕತೆ

ಅರಬ್ ಜಗತ್ತಿನಲ್ಲಿ ಎದ್ದಿರುವ ಅಭೂತಪೂರ್ವ ಬಿಕ್ಕಟ್ಟನ್ನು ಶಮನಗೊಳಿಸಲು ಕುವೈತ್ ಪ್ರಯತ್ನಗಳನ್ನು ನಡೆಸುತ್ತಿದೆ.

ಕುವೈತ್ ಆಡಳಿತಗಾರ ಶೇಖ್ ಸಬಾ ಅಲ್ ಅಹ್ಮದ್ ಅಲ್ ಸಬಾ ಮಂಗಳವಾರ ರಾತ್ರಿ ಸೌದಿ ಅರೇಬಿಯಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ದೊರೆ ಸಲ್ಮಾನ್ ಜೊತೆ ಮಾತುಕತೆಗಳನ್ನು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News