ಸಂಘಪರಿವಾರದ ಗೂಂಡಾಗಿರಿಗೆ ಮಣಿಯುವುದಿಲ್ಲ: ಹಿಂದೂ ಸೇನೆಯ ದಾಳಿಗೆ ಯೆಚೂರಿ ಪ್ರತಿಕ್ರಿಯೆ

Update: 2017-06-07 14:37 GMT

ಹೊಸದಿಲ್ಲಿ, ಜೂ.7: ಮೇ.ಲೀತುಲ್ ಗೊಗೊಯ್ ಅವರನ್ನು ಟೀಕಿಸಿ ಬರೆದಿದ್ದ ಲೇಖನವೊಂದನ್ನು ವಿರೋಧಿಸಿ ಬಲಪಂಥೀಯ ಗುಂಪಾದ ಹಿಂದೂ ಸೇನೆಯ ಕಾರ್ಯಕರ್ತರು ಸಿಪಿಎಂ ನಾಯಕ ಸೀತಾರಾಂ ಯೆಚೂರಿಯವರನ್ನು ತಳ್ಳಾಡಿದ ಘಟನೆ ನಡೆದಿದೆ.

ಸೀತಾರಾಂ ಯೆಚೂರಿಯವರು ಸುದ್ದಿಗೋಷ್ಠಿ ನಡೆಸುತ್ತಿದ್ದ ಬಂದ ಇಬ್ಬರು ದುಷ್ಕರ್ಮಿಗಳು ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ್ದಲ್ಲದೆ, ಯೆಚೂರಿಯವರನ್ನು ತಳ್ಳಾಡಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಹಿಂದೂ ಸೇನೆಯ ಉಪೇಂದರ್ ಕುಮಾರ್ ಹಾಗೂ ಪವನ್ ಕೌಲ್ ಎಂದು ಗುರುತಿಸಲಾಗಿದೆ.

ಕಾಶ್ಮೀರದಲ್ಲಿ ಯುವಕನೊಬ್ಬನನ್ನು ಸೇನಾ ಜೀಪ್ ಮುಂಭಾಗಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದ ಮೇಜರ್ ಗೊಗೊಯ್ ಅವರ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು. ಈ ಬಗ್ಗೆ ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಲೇಖನವೊಂದನ್ನು ಬರೆದು ಗೊಗೊಯ್ ಅವರ ಕ್ರಮವನ್ನು ಟೀಕಿಸಿದ್ದರು. ಇದೇ ವಿಚಾರವಾಗಿ ಹಿಂದೂ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ,

“ಸಿಪಿಎಂ ಕಾರ್ಯಕರ್ತರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಿಂದೂ ಸೇನೆ ಕಾರ್ಯಕರ್ತರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ದೇಶ ಹಾಗೂ ಸೇನೆಯ ವಿರುದ್ಧ ಮಾತನಾಡುವವರನ್ನು ನಾವು ಸಹಿಸುವುದಿಲ್ಲ” ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಸೀತಾರಾಮ್ ಯೆಚೂರಿ, “ನಮ್ಮ ಸದ್ದಡಗಿಸುವ ಸಂಘಪರಿವಾರದ ಯಾವುದೇ ಗೂಂಡಾಗಿರಿಗೆ ನಾವು ಮಣಿಯುವುದಿಲ್ಲ. ಇದು ಭಾರತದ ಆತ್ಮದ ಹೋರಾಟ, ನಾವಿದರಲ್ಲಿ ಜಯ ಗಳಿಸುತ್ತೇವೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News