ನೋಟು ರದ್ದತಿಯಿಂದ ರೈತರು ವಿನಾಶದಂಚಿಗೆ: ಶಿವಸೇನೆ ಟೀಕೆ

Update: 2017-06-07 17:32 GMT

ಮುಂಬೈ, ಜೂ.7: ಕೇಂದ್ರ ಸರಕಾರದ ನೋಟು ರದ್ದತಿ ನಿರ್ಧಾರ ಸಾಲದ ಕೂಪದಲ್ಲಿದ್ದ ರೈತರನ್ನು ವಿನಾಶದಂಚಿಗೆ ನೂಕಿದೆ ಎಂದು ಶಿವಸೇನೆ ಟೀಕಿಸಿದೆ.

  ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರಕಾರ ಕೃಷಿ ಕ್ಷೇತ್ರದತ್ತ ಅಸಡ್ಡೆಯ ಭಾವನೆ ತಳೆದಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾದ ಸಂಪಾದಕೀಯ ಲೇಖನದಲ್ಲಿ ಟೀಕಿಸಲಾಗಿದೆ.

 ಹಲವು ವರ್ಷಗಳ ಬಳಿಕ ಕಳೆದ ವರ್ಷದ ಮುಂಗಾರು ಕೃಷಿಕರಲ್ಲಿ ಹುರುಪಿನ ಭಾವನೆ ಮೂಡಿಸಿದ್ದು ಬಂಪರ್ ಬೆಳೆ ಬೆಳೆದಿದ್ದರು . ಆದರೆ ನೋಟು ರದ್ದತಿ ಎಂಬ ಹೊಡೆತದ ಕಾರಣ ರೈತರು ತಮ್ಮ ಬೆಳೆಗಳನ್ನು ಅಲ್ಪ ಬೆಲೆಗೆ ಮಾರಾಟ ಮಾಡುವಂತಾಯಿತು. ಕೃಷಿ ಬೆಳೆಯಲು ಮಾಡಿದ ವೆಚ್ಚವನ್ನೂ ಅವರು ಹಿಂಪಡೆಯಲಾಗಲಿಲ್ಲ. ಇದರಿಂದ ಮೊದಲೇ ಸಾಲದ ಕೂಪದಲ್ಲಿದ್ದ ರೈತರು ವಿನಾಶದ ಅಂಚಿಗೆ ತಳ್ಳಲ್ಪಟ್ಟರು ಎಂದು ಶಿವಸೇನೆ ಹೇಳಿದೆ.

  ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರಕಾರ ಈಗ ಕೃಷಿ ಕ್ಷೇತ್ರವನ್ನೂ ತೆರಿಗೆ ವ್ಯಾಪ್ತಿಯೊಳಗೆ ತರುವ ಯೋಚನೆಯಲ್ಲಿದೆ. ಪಂಚಾಯತ್‌ನಿಂದ ನಗರಪಾಲಿಕೆವರೆಗಿನ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟೇನೂ ಕಷ್ಟವಲ್ಲ.

ನಿಮ್ಮಲ್ಲಿ ಹಣವಿದ್ದರೆ ಚಂದ್ರನಲ್ಲಿ ನಡೆಯುವ ಚುನಾವಣೆಯಲ್ಲೂ ನೀವು ಗೆಲ್ಲಬಹುದು. ಆದರೆ ಜನರನ್ನು ನಿಮ್ಮ ಗುಲಾಮರಂತೆ ಭಾವಿಸಬೇಡಿ. ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಅವರು ಕೇವಲ ಮತಬ್ಯಾಂಕ್‌ಗಳೆಂದು ಭಾವಿಸಬೇಡಿ ಎಂದು ಹೇಳಿರುವ ಶಿವಸೇನೆ, ಚುನಾವಣೆಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವುದೇಕೆ ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News