ಕುಸಿಯುವ ಭೀತಿಯಲ್ಲಿ ಬಿ.ಸಿ.ರೋಡ್ - ಕೈಕಂಬ ಕಾಂಕ್ರಿಟ್ ರಸ್ತೆ

Update: 2017-06-07 18:51 GMT

ಬಂಟ್ವಾಳ, ಜೂ. 7: ಖಾಸಗಿ ಬೃಹತ್ ಕಟ್ಟಡವೊಂದರ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ಮಣ್ಣು ಅಗೆದ ಪರಿಣಾಮ ಬಿ.ಸಿ.ರೋಡ್ ಕೈಕಂಬದಿಂದ ಮದ್ದಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.

ಮುಂಬೈ ಮೂಲದ ವ್ಯಕ್ತಿಯೊಬ್ಬರ ಮಾಲಕತ್ವದ ಬೃಹತ್ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಕೈಕಂಬದಿಂದ ಮದ್ದಕ್ಕೆ ಸಂಚಾರಿಸುವ ರಸ್ತೆಯ ಪಕ್ಕದಲ್ಲಿ ಕಳೆದ ಎರಡು ವರ್ಷದಿಂದ ನಡೆಯುತ್ತಿದೆ. ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ರಸ್ತೆ ಬದಿಯ ಮಣ್ಣನ್ನು ಅಗೆಯಲಾಗಿದ್ದು ಇದೀಗ ಸೋಮವಾರ ಮತ್ತು ಮಂಗಳವಾರ ಸುರಿದ ಭಾರೀ ಮಳೆಗೆ ಮಣ್ಣು ಕುಸಿದು ಕಾಂಕ್ರಿಟ್ ರಸ್ತೆ ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕಾಂಕ್ರಿಟ್ ರಸ್ತೆಯ ಅಡಿ ಭಾಗದಿಂದಲೇ ಮಣ್ಣು ಕುಸಿದಿರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯ ಕಾರಿಯಾಗಿ ಪರಿಣಮಿಸಿದೆ. ರಸ್ತೆಯ ಬದಿಯಲ್ಲಿ ಚರಂಡಿಯೂ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯ ಬದಿಯಲ್ಲಿ ಇಂಗುವುದರಿಂದ ಇನ್ನಷ್ಟು ಮಣ್ಣು ಕುಸಿದು ಬೀಳುವ ಅಪಾಯವಿದೆ. ಕೂಡಲೇ ತಡೆಗೋಡೆ ನಿರ್ಮಿಸದಿದ್ದರೆ ರಸ್ತೆ ಸಂಪೂರ್ಣವಾಗಿ ಧರೆಗುರುಳುವ ಸಂಭವವಿದೆ.

ಮಣ್ಣು ಕುಸಿತದಿಂದ ರಸ್ತೆ ಅಪಾಯದ ಪರಿಸ್ಥಿತಿಯಲ್ಲಿರುವುದರಿಂದ ಬುಧವಾರ ಬೆಳಗ್ಗೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ನಾಗರಿಕರು, ಯಾವುದೇ ಮುಂಜಾಗೃತ ಕ್ರಮ ವಹಿಸದೆ ಅವೈಜ್ಞಾನಿಕ ಹಾಗೂ ನಿಯಮ ಬಾಹಿರವಾಗಿ ರಸ್ತೆ ಬದಿಯನ್ನು ಅಗೆದಿರುವುದರಿಂದ ರಸ್ತೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಗೆ ತಾಗಿಕೊಂಡು ಸುಮಾರು 20 ಅಡಿ ಆಳಕ್ಕೆ ಅಗೆಯುವುದರ ಬಗ್ಗೆ ಈ ಹಿಂದೆಯೇ ಪುರಸಭೆಗೆ ದೂರು ನೀಡಲಾಗಿತ್ತು. ಆದರೆ ಪುರಸಭೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ಮಣ್ಣು ಕುಸಿತದಿಂದ ರಸ್ತೆ ಮಾತ್ರವಲ್ಲದೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು ಕೂಡಾ ಧರೆಗುರುಳುವ ಅಪಾಯದಲ್ಲಿದೆ. ಈ ರಸ್ತೆಯಲ್ಲಿ ದಿನವಿಡೀ ಈ ಭಾಗದ ನಾಗರಿಕರ ವಾಹನಗಳು ಹಾಗೂ ಶಾಲಾ ವಾಹನಗಳು ಸಂಚಾರಿಸುತ್ತದೆ ಎಂದು ತಿಳಿಸಿದ ನಾಗರಿಲಕರು, ಕೂಡಲೇ ಪುರಸಭಾ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಪುರಸಭೆಯ ನಿಯಮದ ಪ್ರಕಾರ ರಸ್ತೆಗೆ ಮೀಸಲಿಡುವ ಜಾಗವನ್ನು ಬಿಟ್ಟು ತಡೆಗೋಡೆ ನಿರ್ಮಿಸುವ ಮೂಲಕ ರಸ್ತೆಯನ್ನು ಉಳಿಸಬೇಕು. ಅಲ್ಲದೆ ಸಂಭವನೀಯ ಅವಘಡವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಬಾಕ್ಸ್.
ಕಾಂಕ್ರಿಟ್ ರಸ್ತೆಯ ಮಧ್ಯ ಭಾಗದಿಂದ ಎಡಕ್ಕೆ ಮತ್ತು ಬಲಕ್ಕೆ 3.75 ಮೀಟರ್‌ನಂತೆ ಒಟ್ಟು 7 ಮೀಟರ್ ಜಾಗ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಿಸಬೇಕು. ರಸ್ತೆ ಬದಿಯನ್ನು ಅಗೆಯುವಾಗ ಪುರಸಭೆಯಿಂದ ಅನುಮತಿ ಪಡೆಯಬೇಕಲ್ಲದೆ ಅಗೆಯುವ ಸಂದರ್ಭದಲ್ಲಿ ಮುಂಜಾಗೃತ ಕ್ರಮವನ್ನು ವಹಿಸಬೇಕು. ಪುರಸಭೆಯ ನಿಯಮಗಳನ್ನು ಉಲ್ಲಂಘೀಸಿ ರಸ್ತೆಯ ಜಾಗವನ್ನು ಅಗೆಯಲಾಗಿದೆ ಮತ್ತು ಯಾವುದೇ ಮುಂಜಾಗೃತ ಕ್ರಮಗಳನ್ನೂ ಪಾಲಿಸಿಲ್ಲ ಎಂದು ಸ್ಥಳೀಯರಿಂದ ದೂರುಗಳು ಬಂದಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕಟ್ಟಡ ಮಾಲಕರಲ್ಲಿ ವಿವರ ಪಡೆಯಲಾಗುವುದು. ನಿಯಮ ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು.
- ಸುಧಾಕರ್, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ

ಬಾಕ್ಸ್.

ಕಟ್ಟಡ ನಿರ್ಮಾಣಕ್ಕಾಗಿ ಕೈಕಂಬದಿಂದ ಮದ್ದಗೆ ಸಂಪರ್ಕಿಸುವ ರಸ್ತೆಗೆ ತಾಗಿಕೊಂಡು ಸುಮಾರು 20 ಅಡಿಯಷ್ಟು ಆಳಕ್ಕೆ ಅಗೆಯಲಾಗಿದೆ. ಎರಡು ದಿನ ಸುರಿದ ಮಳೆಗೆ ಮಣ್ಣು ಕುಸಿದಿದೆ ಇದೀಗ ರಸ್ತೆ ಕುಸಿಯುವ ಭಿತಿಯಲ್ಲಿದ್ದು ವಾಹನಗಳ ಸಂಚಾರವೂ ಅಪಾಯಕಾರಿಯಾಗಿದೆ. ರಸ್ತೆಯಿಂದ ಇಂತಿಷ್ಟು ಜಾಗ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕೆಂಬ ನಿಯಮ ಇರುವಾಗ ರಸ್ತೆಗೆ ತಾಗಿಕೊಂಡು ಮಣ್ಣ ಅಗೆದಿರುವುದು ನಿಯಮದ ಉಲ್ಲಂಘನೆಯಾಗಿದೆ. ಮಳೆಗಾಲದಲ್ಲಿ ರಸ್ತೆಬದಿಯಲ್ಲಿ 20 ಅಡಿಯಷ್ಟು ಅಗೆಯುವಾಗ ಮುಂಜಾಗೃತ ಕ್ರಮಗಳನ್ನು ವಹಿಸಬೇಕಿತ್ತು. ಅದ್ಯಾವುದನ್ನೂ ಅನುಸರಿಸದ ಪರಿಣಾಮ ಇದೀಗ ರಸ್ತೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚರಗೊಂಡು ರಸ್ತೆಯನ್ನು ಉಳಿಸುವ ಕೆಲಸ ಮಾಡಬೇಕು. - ಶಾಹುಲ್ ಹಮೀದ್ ಎಸ್.ಎಚ್., ಸ್ಥಳೀಯ ನಾಗರಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News