ಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ : ಗಣೇಶ್ ರಾವ್

Update: 2017-06-08 07:59 GMT

ಮಂಗಳೂರು, ಜೂ.8: ಪ್ರಜಾಪ್ರಭುತ್ವದ ಸಮಾಜದಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗದಲ್ಲಿರುವ ಪರ್ತಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಬರವಣಿಗೆಯನ್ನು ಲಾಭದ ದೃಷ್ಟಿಯಿಂದ ಕಾಣದೆ ಸಮಾಜದಲ್ಲಿನ ಓರೆಕೋರೆಯನ್ನು ತಿದ್ದುವುದರೊಂದಿಗೆ ಎಲ್ಲ ವರ್ಗದ ಜನರನ್ನು ಗುರುತಿಸುವ ಅಗತ್ಯವಿದೆ ಎಂದು ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಸ್.ಗಣೇಶ್ ರಾವ್ ಹೇಳಿದರು.
ನಗರದ ಪುರಭವನದಲ್ಲಿ ನಡೆದ ‘ಎಂಪಿಎಂಎಲ್‌ಎ’ ಸುದ್ದಿ ಮಾಧ್ಯಮದ 10ನೇ ಸೌಹಾರ್ದ ಸಂಗಮದ ಪ್ರಶಸ್ತಿ ಪ್ರದಾನ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.

ಸಂಸದ ನಳಿನ್‌ಕುಮಾರ್ ಕಟೀಲು, ತುಳು ರಂಗಭೂಮಿಯ ನಟ ದೇವದಾಸ್ ಕಾಪಿಕಾಡ್, ಕರ್ನಾಟಕ ವಕೀಲರ ಪರಿಷತ್‌ನ ಮಾಜಿ ಉಪಾಧ್ಯಕ್ಷ ತೋನ್ಸೆ ನಾರಾಯಣ ಪೂಜಾರಿ, ಕೆನರಾ ಬ್ಯಾಂಕ್‌ನ ಹಿರಿಯ ಪ್ರಬಂಧಕ ಕೆ.ಎ.ನ್ಯಾಕ್, ಪಣಂಬೂರು ಬೀಚ್‌ನ ಸಿ.ಇ.ಒ. ಯತೀಶ್ ಬೈಕಂಪಾಡಿ, ವಕೀಲ ಜಯರಾಂ ರೈ ಬಿ.ಸಿ.ರೋಡ್ ಶುಭ ಹಾರೈಸಿದರು. ಚಲನಚಿತ್ರ ನಟಿ ಅಮೃತಾ ಹೆಗ್ಡೆ ಎಂಪಿಎಂಎಲ್‌ಎ ಪತ್ರಿಕೆಯ ದಶಮಾನೋತ್ಸವ ಸಂಚಿಕೆಯನ್ನು ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಗೀತಾ ಬಾ, ಚಿತ್ರ ನಿರ್ಮಾಪಕಿ ಗೀತಾ ಹೆಗ್ಡೆ, ಹಿರಿಯ ಸಾಹಿತಿ ಶಿವಾನಂ ಕರ್ಕೇರ, ಬಂಟ್ವಾಳ ತಾಲೂಕು ಇಂಜಿನಿಯರ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಆನಂದ ಬಂಜನ್, ಚಲನಚಿತ್ರ ನಿರ್ದೇಶಕ ಇಸ್ಮಾಯೀಲ್ ಮೂಡುಶೆಡ್ಡೆ, ಕೃಷಿಕ ದಿಲೀಪ್ ರೈ ವಳವೂರು, ತುಳುನಾಡ ಪ್ರತಿಷ್ಠಾನದ ಅಧ್ಯಕ್ಷ ರಾಜೇಶ್ ಅಮೀನ್, ಗಂಗಾಧರ ಗಾಂಧಿ, ವಿಶ್ವನಾಥ ದೊಡ್ಡಮನೆ, ಕರುಣಾಕರ ಶೆಟ್ಟಿ ಸಚ್ಚೇರಿಪೇಟೆ ಮತ್ತಿತರರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು (ವರ್ಷದ ವ್ಯಕ್ತಿ), ಸಂಸದ ನಳಿನ್‌ಕುಮಾರ್ ಕಟೀಲು (ಸೌಹಾರ್ದ ಪ್ರಶಸ್ತಿ), ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು (ಸೌಹಾರ್ದ ಪುರಸ್ಕಾರ), ಬೆಸ್ಟ್ ಡಾಕ್ಟರ್ಸ್‌ ಪ್ರಶಸ್ತಿಯನ್ನು ವೈದ್ಯಕೀಯ ತಜ್ಞ ಡಾ.ಎನ್.ಆರ್.ರಾವ್, ಇಎನ್‌ಟಿ ತಜ್ಞ ಡಾ.ಸತೀಶ್ ಭಂಡಾರಿ, ಹೃದಯ ತಜ್ಞ ಡಾ.ಡಿ.ನರಸಿಂಹ ಪೈ, ಶಸ್ತ್ರ ಚಕಿತ್ಸಾ ತಜ್ಞ ಡಾ.ಅಮರ್ ಡಿ.ಎನ್., ಮಕ್ಕಳ ತಜ್ಞ ಡಾ.ಸಂತೋಷ್ ಟಿ.ಸೋನ್ಸ್, ವೆನ್ಲಾಕ್ ಆಸ್ಪತ್ರೆಯ ಡಾ.ಜೂಲಿಯಟ್ ಎ.ಎಫ್.ಸಲ್ಡಾನ, ಮಂಗಳೂರು ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣ ಆರ್ (ಮೀಡಿಯಾ), ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ. ಶೆಟ್ಟಿ (ಫಿಲ್ಮ್ ಅವಾರ್ಡ್) ಕಿನ್ನಿಗೋಳಿಯ ವಿಜಯಾ ಕಲಾವಿದರ ತಂಡದ ನರೇಂದ್ರ ಕೆರೆಕಾಡು (ರಂಗಭೂಮಿ), ಕೆಂಚನಕೆರೆಯ ಶ್ರೀನಾಥ್ (ಉದ್ಯೋಗ ರತ್ನ), ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ (ಯಕ್ಷಗಾನ), ಅಂಕಣಕಾರ ಎಸ್.ಜಗದೀಶ್ಚಂದ್ರ ಸೂಟರ್‌ಪೇಟೆ (ಕ್ರೀಡಾ ವರದಿಗಾರಿಕೆ), ಉಳ್ಳಿಪಾಡಿ ಜಗನ್ನಾಥ ರೈ (ಕೃಷಿಕ), ದಿನೇಶ್ ಅತ್ತಾವರ (ನಾಟಕರಂಗ), ರೂಪಾ ಆರ್. ಶೆಟ್ಟಿ (ಯೋಗಪಟು), ವಿದ್ಯಾಧರ್ ಶೆಟ್ಟಿ (ದೃಶ್ಯ ಮಾಧ್ಯಮ) ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಚಂದ್ರಕುಮಾರ್, ಪ.ಜಾತಿ ಮತ್ತು ಪ.ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿಯವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಂಪಿಎಂಎಲ್‌ಎ ಸುದ್ದಿ ಮಾಧ್ಯಮದ ಮುಖ್ಯಸ್ಥ ಅಶೋಕ್ ಶೆಟ್ಟಿ ಬಿ.ಎನ್. ಸ್ವಾಗತಿಸಿದರು. ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಮತ್ತು ನರೇಶ್‌ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News