ಮೃತಪಟ್ಟ ರೈತರ ಬಗ್ಗೆ ಪ್ರಶ್ನಿಸಿದ್ದಕ್ಕೆ “ಯೋಗ ಮಾಡಿ” ಎಂದ ಕೇಂದ್ರ ಸಚಿವ!
Update: 2017-06-08 18:39 IST
ಪಾಟ್ನಾ, ಜೂ.8: ಮಧ್ಯಪ್ರದೇಶ ಮಂದಸೌರ್ ನಲ್ಲಿ ರೈತರ ಹೋರಾಟ ಕಾವೇರುತ್ತಿದ್ದರೆ ಇತ್ತ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಯೋಗಗುರು ಬಾಬಾ ರಾಮ್ ದೇವ್ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇಷ್ಟೇ ಅಲ್ಲದೆ, ಗುಂಡೇಟಿನಲ್ಲಿ ಮೃತಪಟ್ಟ ರೈತರ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ “ಯೋಗ ಮಾಡಿ” ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಾ ಮೋಹನ್ ಸಿಂಗ್ ರಾಮ್ ದೇವ್ ರ ಆಹ್ವಾನದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ್ದೇನೆ ಎಂದರು.
ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಕಲ್ಪಿಸುವಂತೆ ಒತ್ತಾಯಿಸಿ ನೂರಾರು ರೈತರು ಹೋರಾಟ ನಡೆಸಿದ್ದರು. ಈ ಸಂದರ್ಭ ಪೊಲೀಸರ ಗುಂಡಿನ ದಾಳಿಗೆ ಐವರು ಮೃತಪಟ್ಟಿದ್ದರು. ಇದೇ ವಿಷಯವಾಗಿ ಪತ್ರಕರ್ತರು ಸಚಿವರನ್ನು ಪ್ರಶ್ನಿಸಿದ್ದು, “ಯೋಗ ಮಾಡಿ” ಎಂದು ಅವರು ಉತ್ತರಿಸಿದ್ದಾರೆ ಎನ್ನಲಾಗಿದೆ. ಸಚಿವರ ಈ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ.