×
Ad

ಕತರ್ ಆಮಿರ್‌ಗೆ ಟ್ರಂಪ್ ಕರೆ, ಬಿಕ್ಕಟ್ಟು ಶಮನಕ್ಕೆ ಅಮೆರಿಕದ ನೆರವಿನ ಭರವಸೆ

Update: 2017-06-08 19:10 IST

ವಾಶಿಂಗ್ಟನ್, ಜೂ. 8: ಹಲವು ಅರಬ್ ದೇಶಗಳಿಂದ ದಿಗ್ಬಂಧನಕ್ಕೆ ಒಳಗಾಗಿರುವ ಕತರ್‌ನ ಆಮಿರ್‌ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಟೆಲಿಫೋನ್ ಕರೆ ಮಾಡಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಅಮೆರಿಕದ ನೆರವಿನ ಕೊಡುಗೆಯನ್ನು ನೀಡಿದರು.

ಕತರ್‌ನಲ್ಲಿ ಆಡಳಿತ ಬದಲಾಗಬೇಕೆಂದು ಅದರೊಂದಿಗೆ ಸಂಪರ್ಕ ಕಡಿದುಕೊಂಡಿರುವ ದೇಶಗಳು ಬಯಸುತ್ತಿಲ್ಲ ಎಂದು ಯುಎಇಯ ಹಿರಿಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿರುವಂತೆಯೇ, ಕತರ್ ಆಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರಿಗೆ ಟ್ರಂಪ್ ಕರೆ ಮಾಡಿದ್ದಾರೆ. ಕತರ್ ಅಮೆರಿಕದ ಪ್ರಮುಖ ಮಿತ್ರಪಕ್ಷವಾಗಿದೆ.

 ‘‘ಅಗತ್ಯ ಬಿದ್ದರೆ ಶ್ವೇತಭವನದಲ್ಲಿ ಸಭೆಯೊಂದನ್ನು ಏರ್ಪಡಿಸಿ ಚರ್ಚಿಸುವುದು ಸೇರಿದಂತೆ ಕೊಲ್ಲಿ ಅರಬ್ ದೇಶಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಹಲವು ವಿಧಗಳಲ್ಲಿ ಶ್ರಮಿಸುವ ಕೊಡುಗೆಯನ್ನು ಅಧ್ಯಕ್ಷರು ನೀಡಿದರು’’ ಎಂದು ಫೋನ್ ಕರೆಯ ಬಳಿಕ ಟ್ರಂಪ್ ಕಚೇರಿ ತಿಳಿಸಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಯುಎಇ, ಬಹರೈನ್, ಈಜಿಪ್ಟ್, ಯಮನ್, ಲಿಬಿಯಗಳು ಆ ದೇಶದೊಂದಿಗೆ ಮೂರು ದಿನಗಳ ಹಿಂದೆ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

ಕೊಲ್ಲಿಯಲ್ಲಿ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಕೊಳ್ಳುವುದಕ್ಕೆ ತಾನು ಸಿದ್ಧ ಎಂದು ಫೋನ್ ಕರೆಯ ವೇಳೆ ಹೇಳಿದ ಟ್ರಂಪ್, ಕೊಲ್ಲಿಯಲ್ಲಿ ಸ್ಥಿರತೆ ನೆಲೆಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News