ಫ್ಲಿನ್ ವಿರುದ್ಧದ ತನಿಖೆ ಕೈಬಿಡಲು ಟ್ರಂಪ್ ಒತ್ತಾಯಿಸಿದ್ದರು: ಮಾಜಿ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ

Update: 2017-06-08 14:08 GMT

ವಾಶಿಂಗ್ಟನ್, ಜೂ. 8: ರಶ್ಯ ಸಂಪರ್ಕಗಳಿಗಾಗಿ ನಿಗಾದಲ್ಲಿದ್ದ ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಮೈಕಲ್ ಫ್ಲಿನ್ ವಿರುದ್ಧದ ತನಿಖೆಯನ್ನು ಕೈಬಿಡುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ಒತ್ತಾಯಿಸಿದ್ದರು ಎಂದು ಎಫ್‌ಬಿಐಯ ಮಾಜಿ ನಿರ್ದೇಶಕ ಜೇಮ್ಸ್ ಕಾಮಿ ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಜೇಮ್ಸ್ ಕಾಮಿಯನ್ನು ಕಳೆದ ತಿಂಗಳು ಟ್ರಂಪ್ ಹುದ್ದೆಯಿಂದ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಫ್ಲಿನ್ ವಿರುದ್ಧ ನೀವು ತನಿಖೆ ಮಾಡುವ ಅಗತ್ಯವಿಲ್ಲವೆಂದು ನನಗೆ ಕಾಣುತ್ತದೆ. ಅವರು ಒಳ್ಳೆಯವರು’’ ಎಂಬುದಾಗಿ ಓವಲ್ ಕಚೇರಿಯಲ್ಲಿ ಫೆಬ್ರವರಿ 14ರಂದು ತಾವಿಬ್ಬರೇ ಕುಳಿತಿದ್ದಾಗ ಟ್ರಂಪ ಹೇಳಿರುವುದಾಗಿ ಕಾಮಿ ತಿಳಿಸಿದರು.

‘‘ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಶ್ಯದ ರಾಯಭಾರಿ ಜೊತೆ ತಾನು ನಡೆಸಿದ ಮಾತುಕತೆಗಳ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಿದ ಸಂಬಂಧ ಫ್ಲಿನ್ ವಿರುದ್ಧ ನಡೆಸಲಾಗುತ್ತಿದ್ದ ತನಿಖೆಯನ್ನು ಕೈಬಿಡುವಂತೆ ಅಧ್ಯಕ್ಷರು ನಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂಬುದಾಗಿ ನಾನು ಆ ಮಾತುಗಳನ್ನು ಅರ್ಥಮಾಡಿಕೊಂಡೆ’’ ಎಂದು ಕಾಮಿ ಹೇಳಿದ್ದಾರೆ.

ಕಾಮಿ ಗುರುವಾರ ಸೆನೆಟ್ ಗುಪ್ತಚರ ಸಮಿತಿಯ ಮುಂದೆ ಹಾಜರಾಗಿ ಈ ಸಂಬಂಧ ಹೇಳಿಕೆ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News