×
Ad

ಭಾರತದ ಗಡಿಗಳು ಈಗ ಮೊದಲಿಗಿಂತ ‘ಹೆಚ್ಚು ಸುಭದ್ರ’:ರಾಜನಾಥ್

Update: 2017-06-09 16:04 IST

ಜೈಪುರ,ಜೂ.9: ಭಾರತದ ಗಡಿಗಳು ಈಗ ಹಿಂದೆಂದಿಗಿಂತ ‘ಹೆಚ್ಚು ಸುಭದ್ರ’ವಾಗಿವೆ ಮತ್ತು ಅಕ್ರಮ ನುಸುಳುವಿಕೆಯನ್ನು ತಡೆಯಲು ಅವುಗಳನ್ನು ಇನ್ನಷ್ಟು ಸುಭದ್ರಗೊಳಿಸ ಲಾಗುವುದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ನರೇಂದ್ರ ಮೋದಿ ಸರಕಾರದ ಮೂರನೇ ವರ್ಷಾಚರಣೆಯ ಅಂಗವಾಗಿ ಇಲ್ಲಿ ಏರ್ಪಡಿಸಲಾದ ‘ಮೋದಿ-ಫೆಸ್ಟ್’ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಕಳೆದ ವರ್ಷ ನಿಯಂತ್ರಣ ರೇಖೆಯಾಚೆಯ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಪಡೆಗಳು ನಡೆಸಿದ್ದ ಸರ್ಜಿಕಲ್ ದಾಳಿಯು ಅಗತ್ಯವಾದರೆ ಭಾರತವು ತನ್ನ ಗಡಿಯಾಚೆಯ ಗುರಿಗಳ ಮೇಲೂ ಎರಗಬಲ್ಲುದು ಎಂಬ ಕಠಿಣ ಸಂದೇಶವನ್ನು ರವಾನಿಸಿದೆ ಎಂದರು.

ಭಯೋತ್ಪಾದಕರು ಪಾಕಿಸ್ತಾನದಿಂದ ಭಾರತದೊಳಗೆ ನುಸುಳಿ ನಮ್ಮ ಯೋಧರ ಮೇಲೆ ದಾಳಿ ನಡೆಸಿ ಅವರನ್ನು ಕೊಂದಿದ್ದರು. ಪ್ರಧಾನಿಯವರು ಕರೆದಿದ್ದ ಸಭೆಯ ಬಳಿಕ ನಮ್ಮ ಸೇನೆಯು ಸರ್ಜಿಕಲ್ ದಾಳಿಯನ್ನು ಯಶಸ್ವಿಯಾಗಿ ನಡೆಸಿತು ಎಂದ ಅವರು, ಪಾಕಿಸ್ತಾನದತ್ತ ಮೊದಲ ಗುಂಡನ್ನು ಹಾರಿಸದಂತೆ,ಆದರೆ ಪಾಕಿಸ್ತಾನವು ಗುಂಡು ಹಾರಿಸಿದರೆ ಪರಿಣಾಮಕಾರಿ ಪ್ರತಿದಾಳಿ ನಡೆಸುವಂತೆ ತಾನು ಬಿಎಸ್‌ಎಫ್ ಮಹಾ ನಿರ್ದೇಶಕರಿಗೆ ನಿರ್ದೇಶ ನೀಡಿದ್ದೆ ಎಂದರು.

ದೇಶದ ಅಭಿವೃದ್ಧಿಗಾಗಿ ಸರಕಾರವು ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ ಮತ್ತು ‘ನವ ಭಾರತ’ವನ್ನು ಸ್ಥಾಪಿಸಲು ಉದ್ದೇಶಿಸಿದೆ. ಇದಕ್ಕಾಗಿ ಜನರ, ವಿಶೇಷವಾಗಿ ಯುವಜನರ ಸಹಕಾರ ಅಗತ್ಯವಾಗಿದೆ ಎಂದರು. 2019ರ ವೇಳೆಗೆ ಐದು ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲು ಸರಕಾರವು ಯೋಜಿಸಿದೆ ಎಂದರು.

ಹಿಂದಿನ ಯುಪಿಎ ಸರಕಾರದ ಆಡಳಿತದಲ್ಲಿ ಭ್ರಷ್ಟಾಚಾರವು ವ್ಯಾಪಕವಾಗಿತ್ತು. ಆದರೆ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಈವರೆಗಿನ ಮೂರು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ ಎಂದು ಸಿಂಗ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News