×
Ad

ಪಾಕ್‌ನಲ್ಲಿ ಉಗ್ರ ಆಶ್ರಯ ತಾಣಗಳೇ ಇಲ್ಲ ಎಂದ ಪಾಕ್ ರಾಯಭಾರಿ, ಜೋರಾಗಿ ನಕ್ಕ ಸಭಿಕರು!

Update: 2017-06-09 18:27 IST

ವಾಶಿಂಗ್ಟನ್, ಜೂ. 9: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣಗಳೇ ಇಲ್ಲ ಹಾಗೂ ಇತ್ತೀಚೆಗೆ ಕರಾಚಿಯ ಆಸ್ಪತ್ರೆಯಲ್ಲಿ ಮೃತಪಟ್ಟನೆನ್ನಲಾದ ತಾಲಿಬಾನ್ ನಾಯಕ ಅಫ್ಘಾನಿಸ್ತಾನದಿಂದ ಹೊರಬಂದೇ ಇಲ್ಲ ಎಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಐಝಾಝ್ ಅಹ್ಮದ್ ಚೌಧರಿ ಹೇಳಿದರು.

ಅವರು ಈ ಮಾತುಗಳನ್ನು ಹೇಳಿದ್ದು ವಾಶಿಂಗ್ಟನ್‌ನಲ್ಲಿ ಚಿಂತಕರ ವೇದಿಕೆಯೊಂದು ಏರ್ಪಡಿಸಿದ ಸಮಾರಂಭದಲ್ಲಿ.

ರಾಯಭಾರಿ ಈ ಮಾತುಗಳನ್ನು ಪದೇ ಪದೇ ಹೇಳಿದಾಗ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ನಗು ತಡೆಯಲಾಗಲಿಲ್ಲ. ಗೊಳ್ಳೆಂದು ನಕ್ಕರು!

ಇದರಿಂದ ಕಸಿವಿಸಿಗೊಂಡ ಚೌಧರಿ, ಇದರಲ್ಲಿ ನಗುವಂಥ ತಮಾಷೆಯ ಸಂಗತಿಯೇನಿದೆ ಎಂದು ಪ್ರಶ್ನಿಸಿದರು.

ಆದರೆ, ವಾಸ್ತವ ಭಿನ್ನವಾಗಿದೆ ಎಂದು ಅಮೆರಿಕದ ಮಾಜಿ ರಾಜತಾಂತ್ರಿಕ ಝಲ್ಮಾಯ್ ಖಲೀಲ್ಝಾದ್ ವಾದಿಸಿದರು. ಅವರು ಅಫ್ಘಾನಿಸ್ತಾನ, ಇರಾಕ್ ಮತ್ತು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.

''ತಾಲಿಬಾನ್ ನಾಯಕ ಮುಲ್ಲಾ ಉಮರ್ ಪಾಕಿಸ್ತಾನದಲ್ಲಿ ಇರುವ ಬಗ್ಗೆ ನಮ್ಮಲ್ಲಿ ಖಚಿತ ಪುರಾವೆಯಿದೆ. ಆತ ಪಾಕಿಸ್ತಾನಕ್ಕೆ ಹೋದ, ಅಲ್ಲಿಯೇ ಬದುಕಿದ, ಆಸ್ಪತ್ರೆಗೆ ದಾಖಲಾದ'' ಎಂದರು. ಉಸಾಮ ಬಿನ್ ಲಾದನ್ ಕೂಡ ಅಫ್ಘಾನಿಸ್ತಾನದಿಂದ ಹೊರಬಂದೇ ಇಲ್ಲ ಎಂಬ ನಂಬಿಕೆಯನ್ನು ಜನರು ತುಂಬಾ ಸಮಯ ಹೊಂದಿದ್ದರು ಎಂದು ಅವರು ಹೇಳಿದರು. (ಲಾದನ್‌ನನ್ನು ಪಾಕಿಸ್ತಾನದ ಅಬೊಟಾಬಾದ್‌ನಲ್ಲಿದ್ದ ಅಡಗುದಾಣವೊಂದರಲ್ಲಿ ಅಮೆರಿಕದ ಪಡೆಗಳು ಕೊಂದಿರುವುದನ್ನು ಸ್ಮರಿಸಬಹುದಾಗಿದೆ.)

ಅಟ್ಲಾಂಟಿಕ್ ಕೌನ್ಸಿಲ್ಸ್ ಸೌತ್ ಏಶ್ಯ ಸೆಂಟರ್ ಏರ್ಪಡಿಸಿದ ಚರ್ಚಾ ಕೂಟವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ಭಯೋತ್ಪಾದಕ ಆಶ್ರಯ ತಾಣಗಳು ಪಾಕಿಸ್ತಾನದಲ್ಲಿ ಈಗಲೂ ಇವೆ ಹಾಗೂ ಭಯೋತ್ಪಾದಕರಿಗೆ ಪಾಕಿಸ್ತಾನಿ ಸರಕಾರದಿಂದ ಒಂದು ಹಂತದ ಬೆಂಬಲವೂ ಸಿಗುತ್ತದೆ ಎಂದು ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಮಾಜಿ ಸಚಿವ ಮನೀಶ್ ತಿವಾರಿ ಮತ್ತು ಅಮೆರಿಕದ ವಿದ್ವಾಂಸ ಆ್ಯಶ್ಲೇ ಟೆಲಿಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News