ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮೋದಿ ಕರೆ: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪ್ರಧಾನಿ ಭಾಷಣ

Update: 2017-06-09 14:40 GMT

ಅಸ್ತಾನ (ಕಝಖ್‌ಸ್ತಾನ್), ಜೂ. 9: ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಹೋರಾಡಲು ಹಾಗೂ ದೇಶಗಳ ಸಾರ್ವಭೌಮತೆ ಮತ್ತು ಭೂ ಸಮಗ್ರತೆಯನ್ನು ಉಲ್ಲಂಘಿಸದೆ ಅವುಗಳ ನಡುವಿನ ಸಂಪರ್ಕವನ್ನು ವೃದ್ಧಿಸಲು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸದಸ್ಯ ದೇಶಗಳು ಸಂಘಟಿತ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

ಕಝಕ್ ರಾಜಧಾನಿ ಅಸ್ತಾನದಲ್ಲಿ ಸುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಈ ಗುಂಪಿಗೆ ಭಾರತ ಸೇರ್ಪಡೆಗೊಂಡಿರುವುದು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಹೊಸ ವೇಗ ನೀಡಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

‘‘ಭಯೋತ್ಪಾದನೆ ಮಾನವಹಕ್ಕುಗಳು ಮತ್ತು ಮೂಲ ಮಾನವೀಯ ವೌಲ್ಯಗಳ ಉಲ್ಲಂಘನೆಯಾಗಿದೆ. ಉಗ್ರವಾದಿ ಸಿದ್ಧಾಂತಗಳ ಬೋಧನೆಯಾಗಿರಲಿ, ಭಯೋತ್ಪಾದಕರ ನೇಮಕಾತಿಯಾಗಿರಲಿ, ಅವರಿಗೆ ತರಬೇತಿ ಮತ್ತು ಹಣ ನೀಡುವುದು ಆಗಿರಲಿ, ನಾವು ಸಂಘಟಿತ ಮತ್ತು ಬಲಿಷ್ಠ ಪ್ರಯತ್ನಗಳನ್ನು ಮಾಡದಿದ್ದರೆ ಪರಿಹಾರವೊಂದನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಮೋದಿ ಹೇಳಿದರು.

ಎಸ್‌ಸಿಒದ ಪೂರ್ಣ ಸದಸ್ಯ ದೇಶಗಳಾಗಿ ಭಾರತ ಮತ್ತು ಪಾಕಿಸ್ತಾನಗಳನ್ನು ಶುಕ್ರವಾರ ಸೇರ್ಪಡೆಗೊಳಿಸಲಾಯಿತು.
ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಮತ್ತು ಪಾಕಿಸ್ತಾನವಲ್ಲದೆ, ಚೀನಾ, ಕಝಖ್‌ಸ್ತಾನ್, ಕಿರ್ಗಿಸ್ತಾನ್, ರಶ್ಯ, ತಜಿಕಿಸ್ತಾನ್ ಮತ್ತು ಉಝ್ಬೆಕಿಸ್ತಾನ್ ದೇಶಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News