2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳದಿದ್ದಲ್ಲಿ ಅಧಿಕಾರದಿಂದ ಕಿತ್ತೆಸೆಯಿರಿ: ರಾಜನಾಥ್ ಸಿಂಗ್
Update: 2017-06-09 20:42 IST
ಹೊಸದಿಲ್ಲಿ, ಜೂ.9: 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳದಿದ್ದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜೈಪುರದ ಸಮೀಪ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ರೈತರು ಕೇವಲ ಉತ್ಪಾದಕರು ಮಾತ್ರವಲ್ಲ, ಗ್ರಾಹಕರೂ ಕೂಡ. ಅವರ ಬಳಿ ಹಣವಿದ್ದಾಗ ಅಂಗಡಿ ಮಾಲಕ, ವೈದ್ಯ ಅಥವಾ ಶಿಕ್ಷಕರು ಸೇರಿದಂತೆ ಎಲ್ಲರೂ ದುಡಿಯಲು ಪ್ರಾರಂಭಿಸುತ್ತಾರೆ.
2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದರಲ್ಲಿ ನಾವು ವಿಫಲರಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಿರಿ ಎಂದು ರಾಜನಾಥ್ ಸಿಂಗ್ ಇದೇ ಸಂದರ್ಭ ಹೇಳಿದರು.
ಮಧ್ಯಪ್ರದೇಶದಲ್ಲಿ ಸಾಲಮನ್ನಾ ಹಾಗೂ ಬೆಳೆಗಳಿಗೆ ಉತ್ತಮ ಬೆಲೆ ಕಲ್ಪಿಸುವಂತೆ ರೈತರು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪೊಲೀಸರ ಗುಂಡಿಗೆ 5 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ರೈತರು ಕೂಡ ಇಂತಹದ್ದೇ ಬೇಡಿಕೆಗಳನ್ನು ಮುಂದಿರಿಸಿ ಹೋರಾಟ ನಡೆಸುತ್ತಿದ್ದಾರೆ.