ಸ್ಕಾರ್ಫ್ ಧರಿಸಿದ ವಿದ್ಯಾರ್ಥಿನಿಗೆ ಪ್ರವೇಶ ನಿಷೇಧ: ಕ್ಯಾಂಪಸ್ ಫ್ರಂಟ್ ಖಂಡನೆ

Update: 2017-06-10 09:40 GMT

ಮಂಗಳೂರು, ಜೂ.10: ವಿಧಾನ ಸಭೆ ಅಧಿವೇಶನ ವೀಕ್ಷಣೆಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ತೆಗೆಯಲು ಒತ್ತಾಯಿಸಿ, ಗ್ಯಾಲರಿಗೆ ಪ್ರವೇಶ ನಿರಾಕರಿಸಿದ ಮಾರ್ಷಲ್‌ಗಳ ವರ್ತನೆಯನ್ನು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಮುಮ್ತಾಝ್ ವಸೀಂ ಖಂಡಿಸಿದ್ದಾರೆ.

ಇದು ರಾಜ್ಯದಲ್ಲಿ ಸಂವಿಧಾನವನ್ನು ಜಾರಿಗೊಳಿಸಬೇಕಾದ ವಿಧಾನ ಸೌಧದೊಳಗೆ ಪ್ರವೇಶಿಸಲು ಸ್ಕಾರ್ಫ್ ತೆಗೆಯಲು ಸೂಚಿಸಿರುವುದು ಸಂವಿಧಾನ ನೀಡಿದಂತಹ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಹರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಸಂವಿಧಾನವು ಇಲ್ಲಿನ ನಾಗರಿಕರಿಗೆ ತಮಗಿಷ್ಟವಾದ ವಸ್ತ್ರಗಳನ್ನು ಧರಿಸುವ ಹಕ್ಕನ್ನು ನೀಡಿದೆ. ಹೀಗಿರುವಾಗ ಅಧಿವೇಶನ ನಡೆಯುವ ವೇಳೆ ನಡೆದಂತಹ ಕೃತ್ಯ ಖಂಡನೀಯ. ಜನತೆಯ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿ ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ನೀಡಲ್ಪಡುವ ಅಧಿವೇಶನ ನಡೆಯುವ ಸಮೀಪವೇ ವಿದ್ಯಾರ್ಥಿನಿಯು ಸ್ಕಾರ್ಫ್ ಧರಿಸಿದ್ದಾಳೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸುವುದು, ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಈ ಹಿಂದೆ ಸಂಘಪರಿವಾರದ ಪ್ರಾಯೋಜಿತ ಶಕ್ತಿಗಳು ರಾಜ್ಯದ ಹಲವಾರು ಶಾಲಾ ಕಾಲೇಜುಗಳಲ್ಲಿ ಸ್ಕಾರ್ಫ್ ಸಂಬಂಧಪಟ್ಟ  ವಿವಾದಗಳನ್ನು ಸೃಷ್ಟ್ಟಿಸಿದ್ದು, ಪ್ರಸ್ತುತ ಘಟನೆಯನ್ನು ನೋಡುವಾಗ ವಿಧಾನ ಸೌಧದ ಸಿಬ್ಬಂದಿ ವರ್ಗ ಸಂಘಪರಿವಾರದ ಅಣತಿಯಂತೆ ನಡೆಯುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಅಲ್ಲದೆ ಸರಕಾರವು ಕೂಡಾ ತನ್ನ ಸಿಬ್ಬಂದಿ ವರ್ಗವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿದೆ.
 ಈಗಾಗಲೇ ಫ್ರಾನ್ಸ್, ಆಸ್ಟೇಲಿಯಾ ಮತ್ತು ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಈ ರೀತಿ ಸ್ಕಾರ್ಫ್‌ಗೆ ಸಂಬಂಧ ಪಟ್ಟ ಜನಾಂಗೀಯ ದ್ವೇಷ ನಡೆಯುತ್ತಿದ್ದು, ಪ್ರಸ್ತುತ ವಿಧಾನ ಸೌಧದ ಒಳಗಡೆ ನಡೆದ ಈ ಘಟನೆಯು ಅದನ್ನು ಮೀರಿಸುವಂತಿದೆ. ಈ ರೀತಿಯ ತಾರತಮ್ಯ ಮತ್ತು ವಿದ್ಯಾರ್ಥಿಗಳ ಮೇಲಿನ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳು ದೀನ ದಲಿತರ, ಅಲ್ಪಸಂಖ್ಯಾತರ ಪರವಾದ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ನಡೆಯುತ್ತಿರುವುದು ಖೇದಕರ.ಹಾಗಾಗಿ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಘಟನೆಗೆ ಕಾರಣರಾದ ಸಿಬ್ಬಂದಿ ವರ್ಗವನ್ನು ವಜಾಗೊಳಿಸಬೇಕು ಮತ್ತು ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News