ಜಾನುವಾರು ಮಾರಾಟ ಕಾಯ್ದೆಯಿಂದ ಈಶಾನ್ಯ ರಾಜ್ಯದ ಜನತೆಗೆ ಸಮಸ್ಯೆಯಾಗಿಲ್ಲ: ಕಿರಣ್ ರಿಜಿಜು

Update: 2017-06-10 16:51 GMT

ಹೊಸದಿಲ್ಲಿ, ಜೂ.10: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿರುವ ಕೇಂದ್ರ ಸರಕಾರದ ಕಾನೂನಿನಿಂದ ಈಶಾನ್ಯ ರಾಜ್ಯಗಳಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಕಾರಣ ಜಾರಿಗೊಳಿಸುವುದು ಅನಿವಾರ್ಯವಾಗಿದ್ದ ಆದೇಶದ ಬಗ್ಗೆ ಸೋಗಿನ ಜಾತ್ಯಾತೀತ ಗುಂಪುಗಳು ಮತ್ತು ಕಾಂಗ್ರೆಸ್ ಪಕ್ಷ ಅನವಶ್ಯಕವಾಗಿ ವಿವಾದ ಹುಟ್ಟುಹಾಕಲು ಪ್ರಯತ್ನಿಸುತ್ತಿವೆ ಎಂದವರು ಹೇಳಿದರು.

ಇದೊಂದು ವಿವಾದವೇ ಅಲ್ಲ. ಈಶಾನ್ಯ ರಾಜ್ಯಗಳಲ್ಲಿ ಯಾರೊಬ್ಬರಿಗೂ ಇದರಿಂದ ಸಮಸ್ಯೆಯಾಗಿಲ್ಲ. ತಮಗೆ ಇಷ್ಟ ಎನಿಸಿದ್ದನ್ನು ಜನತೆ ಸೇವಿಸುತ್ತಿದ್ದಾರೆ. ಅಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ, ಯಾರನ್ನೂ ಬಂಧಿಸಿಯೂ ಇಲ್ಲ ಎಂದ ಅವರು, ಕಾಂಗ್ರೆಸ್‌ಗೆ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣ ಇದನ್ನು ಒಂದು ವಿವಾದವನ್ನಾಗಿಸಲು ಶತಪ್ರಯತ್ನ ನಡೆಸುತ್ತಿದೆ ಎಂದರು.

  ಮೇಘಾಲಯದಲ್ಲಿ ಬಿಜೆಪಿ ಪಕ್ಷದ ಹಲವು ಮುಖಂಡರು ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವು ವ್ಯಕ್ತಿಗಳ ನಿರ್ಧಾರ ಯಾವುದೇ ಪರಿಣಾಮ ಬೀರದು. ಕೆಲವು ವ್ಯಕ್ತಿಗಳು ಪಕ್ಷಕ್ಕೆ ರಾಜೀನಾಮೆ ನೀಡಿರುವುದನ್ನೂ ವಿವಾದವನ್ನಾಗಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಟೀಕಿಸಿದರು. ಈಶಾನ್ಯ ರಾಜ್ಯಗಳ ಮಾಂಸದಂಗಡಿಗಳಿಗೆ ಭೇಟಿ ನೀಡಿ ಅಲ್ಲಿರುವ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಳ್ಳುವಂತೆ ಅವರು ಜನರಿಗೆ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News