ಪಕ್ಷದ ಕಚೇರಿ ಮೇಲೆ ಬಾಂಬ್ ದಾಳಿ ನಡೆಯುವ ಮೊದಲೇ ಖಂಡನೆ ಪೋಸ್ಟ್ ಮಾಡಿದ ಬಿಜೆಪಿ ಪದಾಧಿಕಾರಿ!
ಹೊಸದಿಲ್ಲಿ, ಜೂ.11: ಭಾರತೀಯ ಜನತಾ ಪಕ್ಷದ ತಿರುವನಂತಪುರ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಯುವ ಒಂದು ಗಂಟೆ ಮುನ್ನವೇ ಘಟನೆಯನ್ನು ಖಂಡಿಸಿ ಪಕ್ಷದ ಯುವ ಘಟಕದ ಪದಾಧಿಕಾರಿಯೊಬ್ಬರು ಫೇಸ್‌ಬುಕ್ ಪೋಸ್ಟ್ ಮಾಡಿರುವುದು ಪಕ್ಷವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ, ಇದು ಕೇಸರಿ ಪಕ್ಷದ ಯೋಜಿತ ಕೃತ್ಯ ಎನ್ನುವ ಸಂದೇಹ ಮೂಡಿದೆ.
ಏಷ್ಯಾನೆಟ್ ನ್ಯೂಸೇಬಲ್ ವರದಿಯ ಪ್ರಕಾರ, ಯುವ ಮೋರ್ಚಾ ಮುಖಂಡ ಜಯದೇವ ಹರೀಂದ್ರನ್ ನಾಯರ್ ಬುಧವಾರ ಬೆಳಗ್ಗೆ 8:01, ಸಂಜೆ 5:01 ಗಂಟೆ ಹಾಗೂ ಸಮಜೆ 6:31ಕ್ಕೆ ಈ ಘಟನೆಯನ್ನು ಖಂಡಿಸಿ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ್ದರು. ಆದರೆ ವಾಸ್ತವ ಘಟನೆ ನಡೆದಿರುವುದು ರಾತ್ರಿ 8:30 ಮತ್ತು 9 ಗಂಟೆಯ ನಡುವೆ.
ನಾಯರ್ ಅವರ ಪೋಸ್ಟ್ ಈಗಲೂ ಫೇಸ್‌ಬುಕ್‌ನಲ್ಲಿ ಲಭ್ಯವಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಪೋಸ್ಟ್‌ನಲ್ಲಿ ಫೇಸ್‌ಬುಕ್ ಬಳಕೆದಾರರೊಬ್ಬರು ಇನ್ನು ಎರಡು ಗಂಟೆ ಕಾಯಲು ಅವರಿಗೆ ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ಕಾರ್ಯಕರ್ತ, "ವಾಸ್ತವ ದಾಳಿ ನಡೆಯುವವರೆಗೂ ಕಾಯಲು ಸಾಧ್ಯವಿಲ್ಲದವರ ಅನುಯಾಯಿ ಅಲ್ಲ ಬೌದ್ಧಿಕ್ ಪ್ರಮುಖ' ಎಂದು ಛೇಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಜಿಲ್ಲಾ ಸಿಪಿಎಂ ಪ್ರಧಾನ ಕಾರ್ಯದರ್ಶಿ ಅಣವೂರು ನಾಗಪ್ಪ ಬಿಜಪಿಯನ್ನು ಗುರಿ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ವಿ.ಮುರಳೀಧರನ್ ಅವರ ನಿಕಟ ಅನುಯಾಯಿಯಾಗಿರುವ ನಾಯರ್‌ಗೆ ಈ ಘಟನೆ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು ಎಂದು ಚುಚ್ಚಿದ್ದಾರೆ.
ಸೀತಾರಾಂ ಯೆಚೂರಿ ವಿರುದ್ಧದ ದಾಳಿ ಘಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದಾಗಿದೆ ಎಂದು ಅವರು ಹೇಳಿದ್ದಾರೆ. ಹೊಸದಿಲ್ಲಿಯ ಎಕೆಜಿ ಭವನ ಬಳಿ ಯೆಚೂರಿ ಮೇಲೆ ಹಲ್ಲೆ ನಡೆಸಲು ಒಂದು ಗುಂಪು ಮುಂದಾಗಿತ್ತು. ಆದರೆ ಅವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದರು.
ತಿರುವನಂತಪುರ ದಾಳಿಗೆ ಸಿಪಿಎಂ ಕಾರಣ ಎಂದು ಆಪಾದಿಸಿ ಬಿಜೆಪಿ ಒಂದು ದಿನದ ಹರತಾಳ ನಡೆಸಿತ್ತು.