ವರ್ಷದೊಳಗೆ ಹೂಳೆತ್ತುವ ಕಾರ್ಯಕ್ಕೆ ಯೋಜನೆ: ಸಚಿವ ಪ್ರಮೋದ್

Update: 2017-06-11 13:03 GMT

ಉಡುಪಿ, ಜೂ.11: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಡುಪಿ ನಗರಕ್ಕೆ ನೀರು ಉಣಿಸುವ ಹಿರಿಯಡ್ಕ ಬಜೆ ಅಣೆ ಕಟ್ಟಿನಲ್ಲಿ ನೀರಿನ ಮಟ್ಟ 7 ಮೀಟರ್‌ಗೆ ಏರಿಕೆಯಾಗಿದೆ. ಒಂದು ವರ್ಷದೊಳಗೆ ಸ್ವರ್ಣ ನದಿಯ ಹೂಳೆತ್ತುವ ಕಾರ್ಯಕ್ಕೆ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಆರ್ ಝೆಡ್ ಹಾಗೂ ನಾನ್ ಸಿಆರ್‌ಝೆಡ್‌ನಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಸಂಬಂಧಿಸಿದ ಕಾನೂನುಗಳಿಂದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ವರ್ಣ ನದಿಯಲ್ಲಿ ಹೂಳೆತ್ತುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಆದುದರಿಂದ ಹೂಳು ತೆಗೆಯುವ ಕಾರ್ಯಕ್ಕೆ ತೊಂದರೆಯಾಗಿದೆ ಎಂದರು.

ಈ ಬಾರಿ ಮಳೆಗಾಲದಲ್ಲಿ ಎಲ್ಲ ವ್ಯವಸ್ಥೆ ಮಾಡಿ ನೀರಿನ ಮಟ್ಟ ಕಡಿಮೆ ಇರುವಾಗ ಡ್ರಜ್ಜಿಂಗ್ ಯಂತ್ರದ ಮೂಲಕ ಹೂಳೆತ್ತುವ ಬಗ್ಗೆ ಪರಿಶೀಲಿಸ ಲಾಗುವುದು. ಈ ಸಂಬಂಧ ಮೀನುಗಾರಿಕೆ ಇಲಾಖೆಯ ಹಾಗೂ ಮಲ್ಪೆ ಡೆಬ್ಮಾ ಕಂಪೆನಿಯ ಪರಿಣತರ ತಂಡವನ್ನು ಕರೆಸಿ ಒಂದು ವರ್ಷದೊಳಗೆ ಹೂಳು ತೆಗೆಯುವ ಯೋಜನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಇಲ್ಲಿ ಮುಖ್ಯವಾಗಿರುವ ಸಮಸ್ಯೆ ತೆಗೆದ ಹೂಳನ್ನು ವಿಲೇವಾರಿ ಮಾಡು ವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪಾರದರ್ಶಕವಾಗಿ ಏಲಂ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಇದಕ್ಕೆ ಅಡ್ಡಗಾಲು ಇಡುತ್ತಿದ್ದಾರೆ. ಆದುದರಿಂದ ಜಿಲ್ಲಾಧಿಕಾರಿಗಳು ಈ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ರಘುಪತಿ ಭಟ್ ದ್ವಿಮುಖ ನೀತಿ: ಬಾರ್‌ಗಳ ರಕ್ಷಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳನ್ನು ನಗರ ರಸ್ತೆಗಳನ್ನಾಗಿ ಮಾರ್ಪಡಿಸುವ ಕುರಿತ ಸಚಿವ ಸಂಪುಟದ ತೀರ್ಮಾನದಿಂದ ನಗರಸಭೆಗಳ ಅಭಿವೃದ್ಧಿಗೆ ಹೊಡೆತ ಬೀಳಲಿದೆ ಎಂಬ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಹೇಳಿಕೆಗೆ ಪ್ರತಿ ಕ್ರಿಯಿಸಿದ ಸಚಿವರು, ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ನಾನು ವಿರೋಧ ಮಾಡಲು ಆಗುವುದಿಲ್ಲ. ಹಾಗಾಗಿ ರಘುಪತಿ ಭಟ್ ಅವರು ತಮ್ಮದೇ ಸರಕಾರ ಇರುವ ಕೇಂದ್ರಕ್ಕೆ ಈ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಹೇಳುವುದು ಉತ್ತಮ ಎಂದರು.

ಈ ಹಿಂದೆ ಮಲ್ಪೆ- ತೀರ್ಥಹಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡು ವಾಗಲೂ ವಿರೋಧ ವ್ಯಕ್ತಪಡಿಸಿದ್ದ ರಘುಪತಿ ಭಟ್, ಈಗ ಅದನ್ನು ಕೈಬಿಡು ವಾಗಲೂ ವಿರೋಧ ಮಾಡುತ್ತಿದ್ದಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News