×
Ad

ದೇಶದಲ್ಲಿರುವ ನಕಲಿ ಪಾನ್ ಕಾರ್ಡ್ ಗಳು ಎಷ್ಟು ಗೊತ್ತೇ?

Update: 2017-06-11 19:39 IST

ನವದೆಹಲಿ: ಆದಾಯ ತೆರಿಗೆ ದಾಖಲೆಗಳ ಪೈಕಿ ಶೇ. 0.4ರಷ್ಟಿರುವ ಸುಮಾರು 10.52 ಲಕ್ಷ ವೈಯಕ್ತಿಕ ತೆರಿಗೆದಾರರ ನಕಲಿ ಪಾನ್ ಕಾರ್ಡ್‌ಗಳನ್ನು ದೇಶದ ಆರ್ಥಿಕತೆಯ ಹಾನಿಯಲ್ಲಿ ಸಣ್ಣ ಪ್ರಮಾಣ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ದಾಖಲೆಗಳ ಪೈಕಿ 11.35 ಲಕ್ಷ ನಕಲಿ ಅಥವಾ ವಂಚಕ ಶಾಶ್ವತ ಖಾತೆ ಸಂಖ್ಯೆಗಳು ಕಂಡು ಬಂದಿದ್ದು, ಅವುಗಳಲ್ಲಿ 10.52 ಲಕ್ಷ ಶಾಶ್ವತ ಖಾತೆ ಸಂಖ್ಯೆಗಳು ವೈಯಕ್ತಿಕ ತೆರಿಗೆದಾರರಿಗೆ ಸಂಬಂಧಿಸಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಪಾನ್ ಕಾರ್ಡ್ ಪಡೆಯಲು ಹಾಗೂ ಆದಾಯ ತೆರಿಗೆ ಪಾವತಿಯನ್ನು ಮಾಡಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ 139AA ವಿಧಿಯನ್ನು ಎತ್ತಿಹಿಡಿಯುವ ಮುನ್ನ ಮೇಲಿನ ಅಂಶವನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿದೆ.

ಆ ಮೂಲಕ, ಶಾಶ್ವತ ಖಾತೆಗಳ ಸಂಖ್ಯೆಯ ಪೈಕಿ ಶೇ. 0.4ರಷ್ಟು ಮಂದಿ ಮಾತ್ರ ನಕಲಿ ಪಾನ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಹೀಗಾಗಿ ಇಂತಹ ವಿಧಿಯ ಅವಶ್ಯತೆಯಿಲ್ಲಎಂಬ ಅರ್ಜಿದಾರರ ವಾದವನ್ನು ನ್ಯಾ. ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ಶುಕ್ರವಾರ ತಳ್ಳಿ ಹಾಕಿದೆ.

ನಾವು ಶೇಕಡಾವಾರು ಅಂಕಿ-ಅಂಶಗಳ ಮೇಲೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಕಲಿ ಪಾನ್ ಕಾರ್ಡ್‌ಗಳ ಸಂಖ್ಯೆ ಒಟ್ಟಾರೆಯಾಗಿ 10.52 ಲಕ್ಷವಿದ್ದು, ಯಾವುದೇ ಕಾರಣಕ್ಕೂ ಅವನ್ನೂ ದೇಶದ ಆರ್ಥಿಕತೆಗೆ ಹಾನಿ ಮಾಡದ ಹಾಗೂ ಪ್ರತಿಕೂಲ ಪರಿಣಾಮ ಬೀರದ ಸಂಖ್ಯೆ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠದ ಮತ್ತೊಬ್ಬ ನ್ಯಾ. ಅಶೋಕ್ ಭೂಷಣ್ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ನಕಲಿ ಪಾನ್ ಕಾರ್ಡ್‌ಗಳನ್ನು ನಕಲಿ ಕಂಪನಿಗಳಿಗೆ ನಿಧಿ ವರ್ಗಾಯಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಮುಂಗಡವಾಗಿ ಆಕ್ಷೇಪಣೆ ಸಲ್ಲಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಾಸ್ತವವಾಗಿ ಕಂಪನಿಗಳು ಕೇವಲ ಒಬ್ಬ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟಿರುತ್ತವೆ ಮತ್ತು ಅಂತಹ ವೈಯಕ್ತಿಕ ವ್ಯಕ್ತಿಗಳು ತಮ್ಮ ಪರಿಚಯಕ್ಕಾಗಿ ದಾಖಲೆಗಳನ್ನು ಒದಗಿಸಲೇಬೇಕಾಗುತ್ತದೆ ಎಂದು ಹೇಳಿತು.

ಕಪ್ಪು ಹಣ ಹಾಗೂ ಹಣದ ಕಳ್ಳಸಾಗಾಣಿಕೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆದಾಯ ತೆರಿಗೆ ಪಾವತಿಗೆ ಆಧಾರ್ ಜೋಡಣೆಯ ಯೋಜನೆಯನ್ನು ಖಂಡಿಸಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.

ಆಳವಾಗಿ ಬೇರೂರಿರುವ ಇಂತಹ ಪಿಡುಗನ್ನು ಬಹುಕ್ರಮಗಳ ಮೂಲಕ ನಿಭಾಯಿಸಬೇಕಿದ್ದು, ಅವೆಲ್ಲವನ್ನೂ ಏಕಕಾಲಕ್ಕೂ ಪ್ರಾರಂಭಿಸಬಹುದು. ಇವುಗಳ ಒಟ್ಟು ಕ್ರಮಗಳ ಮೂಲಕ ಫಲಿತಾಂಶ ಪಡೆಯಬಹುದಾಗಿದ್ದು, ಪ್ರತ್ಯೇಕವಾಗಿ ವೈಯಕ್ತಿಕ ಕ್ರಮಗಳನ್ನು ಜರುಗಿಸುವುದು ಸಾಕಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News