ಕಾಶ್ಮೀರದಲ್ಲಿನ ಎಳೆಯ ಕಲ್ಲು ತೂರಾಟಗಾರರಿಗೆ ಭಾರತ ದರ್ಶನ ಮಾಡಿಸಲು ಮುಂದಾದ ಸೇನೆ

Update: 2017-06-11 14:42 GMT

ಶ್ರೀನಗರ, ಜೂ.11: ಸೇನೆಯು ಕಾಶ್ಮೀರದಲ್ಲಿಯ ಎಳೆಯ ಕಲ್ಲುತೂರಾಟಗಾರರ ಹಿಂದೆ ಬಿದ್ದಿದೆ, ಆದರೆ ಅವರನ್ನು ಲಾಕಪ್‌ಗೆ ತಳ್ಳಲು ಅಲ್ಲ....ಬದಲಿಗೆ ಅವರಿಗೆ ಭಾರತ ದರ್ಶನವನ್ನು ಮಾಡಿಸಲು ಮತ್ತು ಅವರ ಕನಸುಗಳಿಗೆ ರೆಕ್ಕೆ ಹಚ್ಚಲು.

ಭಾರತ ಮತ್ತು ಅದರ ಅಭಿವೃದ್ಧಿಯನ್ನು ತೋರಿಸಲು ಪ್ರಕ್ಷುಬ್ಧ ದ.ಕಾಶ್ಮೀರದ 20 ಹುಡುಗರ ಗುಂಪೊಂದನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ದ.ಕಾಶ್ಮೀರದಲ್ಲಿ ಬಂಡಾಯ ನಿಗ್ರಹದ ಹೊಣೆಯನ್ನು ಹೊತ್ತಿರುವ ಸೇನೆಯ ವಿಕ್ಟರ್ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡ್ ಆಗಿರುವ ಮೇಜಬಿ.ಎಸ್.ರಾಜು ಅವರು ತಿಳಿಸಿದರು.

ಬಂಡಾಯ ನಿಗ್ರಹ ಕಾರ್ಯಾಚರಣೆಗಳ ವೇಳೆ ಭದ್ರತಾ ಸಿಬ್ಬಂದಿಗಳತ್ತ ಕಲ್ಲು ತೂರಾಟ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದ ಎಳೆಯ ಬಾಲಕರೊಂದಿಗೆ ಮಾತನಾಡಿದಾಗ ರಾಜು ಅವರ ತಲೆಯಲ್ಲಿ ಈ ಶೈಕ್ಷಣಿಕ ಪ್ರವಾಸದ ಪರಿಕಲ್ಪನೆ ಮೊಳೆತಿತ್ತು.

ಈ ಮಕ್ಕಳು ಕಲ್ಲುತೂರಾಟವನ್ನು ನೋಡಿಕೊಂಡೇ ಬೆಳೆದಿವೆ, ಇದೇ ಕಾರಣದಿಂದ ಅವರು ಕಲ್ಲುತೂರಾಟದಲ್ಲಿ ತೊಡಗಿದ್ದಾರೆ ಎಂದು ಯಾರಾದರೂ ಸುಲಭವಾಗಿ ಗ್ರಹಿಸಬಹುದಾಗಿದೆ. ಹುಟ್ಟಿದಾಗಿನಿಂದಲೂ ಈ ಮಕ್ಕಳು ತಮ್ಮ ಸುತ್ತಲಿನ ಸನ್ನಿವೇಶಗಳ ಕೈದಿಗಳಾಗಿದ್ದಾರೆ. ಕೆಲವರಿಗೆ ತಾವೇಕೆ ಕಲ್ಲು ತೂರಾಟ ನಡೆಸುತ್ತಿದ್ದೇವೆ ಎನ್ನುವುದೂ ಗೊತ್ತಿಲ್ಲ. ಹೆಚ್ಚಿನವರು ಮೋಜಿಗಾಗಿ ಕಲ್ಲುತೂರಾಟದಲ್ಲಿ ತೊಡಗಿದ್ದಾರೆ ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ರಾಜು ಹೇಳಿದರು.

ಈ ಮಕ್ಕಳಿಗೂ ಕನಸುಗಳಿವೆ ಎನ್ನುವುದು ಅವರೊಂದಿಗೆ ಮಾತನಾಡಿದ ಯಾರಿಗೇ ಆದರೂ ಅರ್ಥವಾಗುತ್ತದೆ. ಅನಿರೀಕ್ಷಿತ ಪರಿಸ್ಥಿತಿಯಿಂದಾಗಿ ಈ ಕನಸುಗಳಿಗೆ ರೆಕ್ಕೆಗಳಿಲ್ಲ. ಅವರ ಕನಸುಗಳಿಗೆ ರೆಕ್ಕೆ ಹಚ್ಚುವುದಷ್ಟೇ ನನ್ನ ಪ್ರಯತ್ನವಾಗಿದೆ ಮತ್ತು ಇದೇ ಕಾರಣದಿಂದ ಸೇನೆಯ ಸದ್ಭಾವನಾ ಯೋಜನೆಯಡಿ ಇಂತಹ 20 ಮಕ್ಕಳನ್ನು ಭಾರತ ಪ್ರವಾಸಕ್ಕೆ ಕರೆದೊಯ್ಯಬೇಕು ಎಂದು ನಿರ್ಧರಿಸಿದ್ದೇನೆ ಎಂದು ರಾಜು ಹೇಳಿದರು.

ಈ ಮಕ್ಕಳನ್ನು ದಿಲ್ಲಿಗೆ ಕರೆದೊಯ್ದು ಸರಕಾರದಲ್ಲಿರುವವರ ಭೇಟಿಯನ್ನು ಮಾಡಿಸ ಲಾಗುವುದು. ದೇಶದ ವಾಣಿಜ್ಯ ನಗರ ಮುಂಬೈ ಜೊತೆಗೆ ಜೈಪುರ ಮತ್ತು ಇತರ ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಅವರನ್ನು ಕರೆದೊಯ್ಯಲಾಗುವುದು. ಇದಕ್ಕಾಗಿ ಸೇನೆಯು ಸ್ಥಳಿಯ ಪೊಲೀಸರ ನೆರವಿನೊಂದಿಗೆ ಅರ್ಹ ಬಾಲಕರನ್ನು ಗುರುತಿಸುತ್ತಿದೆ.

ಈ ಮಕ್ಕಳ ಪಾಲಿಗೆ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ತುಂಬ ಗೌರವಾನ್ವಿತ ವ್ಯಕ್ತಿಯಾಗಿರುವಂತಿದೆ. ಭಾರತದ ವೈವಿಧ್ಯತೆಯ ಕುರಿತು ಕಲಾಂ ಅವರ ಹೇಳಿಕೆಯನ್ನು ತಾನು ಈ ಮಕ್ಕಳಿಗೆ ವಿವರಿಸಿದೆ. ಅವರು ತಲ್ಲೀನರಾಗಿ ಆಲಿಸಿದ್ದಲ್ಲದೆ ಕೆಲವು ವೌಲಿಕ ಪ್ರಶ್ನೆಗಳನ್ನೂ ಕೇಳಿದ್ದು ಖುಷಿಯನ್ನು ನೀಡಿತ್ತು ಎಂದು ರಾಜು ತಿಳಿಸಿದರು.

ಈ ಮಕ್ಕಳ ಭವಿಷ್ಯವನ್ನು ರೂಪಿಸಲು ಈ ಪ್ರಯತ್ನ ನಡೆಸಲಾಗುತ್ತಿದೆ. ಇವರು ಪ್ರವಾಸದಿಂದ ಮರಳಿದ ಬಳಿಕ ತಮ್ಮ ಅನುಭವಗಳನ್ನು ಇತರ ಯುವ ಕಾಶ್ಮೀರಿಗಳಿಗೆ ತಿಳಿಸುತ್ತಾರೆ, ತನ್ಮೂಲಕ ಮುಂದಿನ ಗುಂಪಿನಲ್ಲಿ ಸೇರ್ಪಡೆಗೊಳ್ಳಲು ಅವರಿಗೆ ಉತ್ತೇಜನ ದೊರೆಯುತ್ತದೆ. ಅದಕ್ಕಾಗಿ ಅವರು ಕಲ್ಲುಗಳನ್ನು ತೂರಬೇಕಾಗಿಲ್ಲ. ಅವರು ತಮ್ಮವರೇ ಆಗಿರುವ ಸೇನೆಯವರನ್ನು ಸಂಪರ್ಕಿಸಿದರೆ ಸಾಕು ಎಂದು ರಾಜು ಹೇಳಿದರು.

 ದ.ಕಾಶ್ಮೀರದ ಅದೆಷ್ಟೋ ಮಕ್ಕಳು ಕಾಶ್ಮೀರ ಕಣಿವೆಯ ಮಾದಕ ಸೌಂದರ್ಯವನ್ನೂ ನೋಡಿಲ್ಲ. ಅವರಿಗೆ ಈ ಸ್ಥಳಗಳ ಪ್ರವಾಸವನ್ನೂ ಮಾಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News