ಸೀಟು ನೀಡದ ಪ್ರಯಾಣಿಕರು: ರೈಲಿನ ನೆಲದಲ್ಲೇ ನಿದ್ರಿಸಿದ ಪ್ಯಾರಾ ಅಥ್ಲೀಟ್ ಸುವರ್ಣ ರಾಜ್

Update: 2017-06-11 15:49 GMT

ಹೊಸದಿಲ್ಲಿ, ಜೂ.11: ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಟೂರ್ನಮೆಂಟ್ ಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ಪ್ಯಾರಾ ಅಥ್ಲೀಟ್  ಸುವರ್ಣ ರಾಜ್ ಅವರು ಇತರ ಪ್ರಯಾಣಿಕರು ಸೀಟು ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಿಲ್ಲಿಯ ರೈಲಿನ ನೆಲದಲ್ಲೇ ನಿದ್ರಿಸಿದ ಘಟನೆ ಬೆಳಕಿಗೆ ಬಂದಿದೆ.

ನಾಗ್ಪುರ-ಹೊಸದಿಲ್ಲಿ ಗರಿಬ್ ರಾಥ್ ಎಕ್ಸ್ ಪ್ರೆಸ್ ರೈಲಿನ ಟಿಕೆಟ್ ಬುಕ್ ಮಾಡುವ ಸಂದರ್ಭ ಸುವರ್ಣ ರಾಜ್ ಅಂಗವೈಕಲ್ಯರ ಕೋಟಾದಡಿ ಲೋವರ್ ಬರ್ತ್ ಟಿಕೆಟ್ ನೀಡುವಂತೆ ವಿನಂತಿಸಿದ್ದರು. ಆದರೆ ಅವರಿಗೆ ಮೇಲಿನ ಸೀಟ್ ನೀಡಲಾಗಿತ್ತು.

“ಟಿಕೆಟ್ ಬುಕ್ ಮಾಡುವ ಸಂದರ್ಭ ಮೇಲಿನ ಸೀಟ್ ನೀಡಿದ್ದರಿಂದ ಅದನ್ನು ಬದಲಾಯಿಸುವಂತೆ ನಾನು ವಿನಂತಿಸಿದೆ. ಅದರಂತೆ ಟಿಕೆಟ್ ಪರೀಕ್ಷಕ ಅದರಂತೆ ಬೋಗಿಯಲ್ಲಿದ್ದ ಪ್ರಯಾಣಿಕರಲ್ಲಿ ಸೀಟು ಬದಲಾಯಿಸುವಂತೆ ಹೇಳಿದ್ದು, ಆದರೆ ಯಾರೂ ನನಗೆ ಸೀಟು ಬಿಟ್ಟು ಕೊಡಲಿಲ್ಲ” ಎಂದು ರಾಜ್ ಹೇಳಿದ್ದಾರೆ.

“ಬೋಗಿಯಲ್ಲಿದ್ದವರು ನನ್ನನ್ನೇ ನೋಡುತ್ತಿದ್ದರು ಹೊರತು ಯಾರೂ ಕರುಣೆ ತೋರಲಿಲ್ಲ. ಇದರಿಂದಾಗಿ ನಾನು ನನ್ನ ಆರು ವರ್ಷದ ಪುತ್ರ ಹಾಗೂ ಸ್ನೇಹಿತೆಯೊಂದಿಗೆ ನೆಲದಲ್ಲೇ ಮಲಗಬೇಕಾಯಿತು” ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು ತುರ್ತು ಟಿಕೆಟ್ ಖರೀದಿಸುವವರಿಗೆ ಆ ಕೋಚ್ ಮೀಸಲಾಗಿತ್ತು ಎಂದಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News