ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯದ ಯೋಜನೆಗಳಿಗೆ ಅರ್ಜಿ ಆಹ್ವಾನ

Update: 2017-06-11 16:23 GMT

ಉಡುಪಿ, ಜೂ.11: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2017-18ರ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಸಾಲ ಸೌಲಭ್ಯ ವನ್ನು ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ 80:10:10ರ ಅನುಪಾತ ದಲ್ಲಿ (ಶೇ.80 ಮುಸ್ಲಿಮರು, ಶೇ.10 ಕ್ರೈಸ್ತರು, ಶೇ.10ರಷ್ಟು ಇತರೆ ಅಂದರೆ ಜೈನರು, ಬೌಧ್ಧರು, ಸಿಖ್ಖರು, ಪಾರ್ಸಿಗಳು) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ, ಶ್ರಮಶಕ್ತಿ ಸಾಲ, ಅರಿವು ವಿದ್ಯಾಭ್ಯಾಸ ಸಾಲ, ಕಿರು (ಮೈಕ್ರೋ) ಸಾಲ ಮತ್ತು ಸಹಾಯಧನ, ಗಂಗಾ ಕಲ್ಯಾಣ, ಕೃಷಿ ಭೂಮಿ ಖರೀದಿ, ಪಶು ಸಂಗೋಪನೆ, ಟ್ಯಾಕ್ಸಿ-ಗೂಡ್ಸ್ ವಾಹನ ಖರೀದಿ, ಪ್ರವಾಸಿ ಸ್ವಯಂ ಉದ್ಯೋಗ (ಕೇರಳ ಮಾದರಿ) ಯೋಜನೆಯಡಿ ಸಾಲ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರಾಜ್ಯದ ಖಾಯಂ ನಿವಾಸಿಯಾಗಿದ್ದು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶಕ್ಕೆ 81,000 ರೂ. ಹಾಗೂ ನಗರ ಪ್ರದೇಶದವರಿಗೆ 1,03,000 ರೂ. ಮೀರಿರಬಾರದು. ಅರಿವು ಯೋಜನೆಯಡಿ 6,00,000 ರೂ., ಟ್ಯಾಕ್ಸಿ-ಗೂಡ್ಸ್ ವಾಹನ ಖರೀದಿ ಯೋಜನೆ, ಪ್ರವಾಸೀ ಸ್ವಯಂ ಉದ್ಯೋಗ ಯೋಜನೆಯಡಿ ಆದಾಯ ಮಿತಿ 4,50,000 ರೂ. ಆಗಿದೆ.

ಅರ್ಜಿದಾರರ ವಯೋಮಿತಿ ಕನಿಷ್ಠ 18ರಿಂದ ಗರಿಷ್ಠ 55 ವರ್ಷಗಳಾಗಿವೆ. ನಿಗಮದ ಯೋಜನೆಯಡಿ ಮಹಿಳೆಯರಿಗೆ ಶೇ.33ರಷ್ಟು, ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇ.3ರಷ್ಟು ಮೀಸಲಾಗಿ ಇರುತ್ತದೆ. ಅರ್ಜಿದಾರರು ತಮ್ಮ ವಿಳಾಸದ ದೃಢೀಕಣಕ್ಕಾಗಿ ಆಧಾರ್ ಪ್ರತಿಯನ್ನು ಸಲ್ಲಿಸಬೇಕು. ಅದನ್ನು ಅವರ ಬ್ಯಾಂಕ್ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಪಡೆಯಲು ಅವಕಾಶ ನೀಡಲಾಗುವುದು.

ವಿವಿಧ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ:

ಸ್ವಯಂ ಉದ್ಯೋಗ ಯೋಜನೆ:-  ಮತೀಯ ಅಲ್ಪಸಂಖ್ಯಾತರು ಕೈಗೊಳ್ಳುವ ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದ ಚಟುವಟಿಕೆಗಳಿಗೆ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುವುದು. ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠಿ ಮಿತಿ 2,00,000 ರೂ. ಸಹಾಯ ಧನ ಹಾಗೂ ಘಟಕ ವೆಚ್ಚದ ಒಂದು ಲಕ್ಷ ರೂ. ಒಳಗೆ ಇರುವ ಚಟುವಟಿಕೆಗಳಿಗೆ ಶೇ.50 ಅಥವಾ ಗರಿಷ್ಠ ಮಿತಿ 35,000 ರೂ. ಸಹಾಯ ಧನ ಮಂಜೂರು ಮಾಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕುಗಳು ಭರಿಸಲಿವೆ.

ಶ್ರಮಶಕ್ತಿ ಯೋಜನೆ:  ಸಾಂಪ್ರದಾಯಿಕ ವೃತ್ತಿ ಕುಲಕಸಬುಗಳ ಅವಶ್ಯಕತೆಗೆ ಇರುವ ಯಂತ್ರೋಪಕರಣಗಳು, ಕಚ್ಛಾ ಸಾಮಗ್ರಿಗಳನ್ನು ಖರೀದಿಸಲು 50,000 ರೂ.ವರೆಗೆ ಸಾಲ, ಸಹಾಯಧನ ಸೌಲಭ್ಯ ನೀಡಲಾಗುವುದು. ಈ ಸಾಲಕ್ಕೆ ಶೇ.50ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು. ಸಾಲಕ್ಕೆ ಶೇ.4ರ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕು.

ಕಿರುಸಾಲ ಯೋಜನೆ:  ಕುಶಲ ಅಥವಾ ಕುಶಲವಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರಕ್ಕೆ ಸ್ವಸಹಾಯ ಗುಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರಕಾರೇತರ ಸಂಸ್ಥೆಗಳ ಮೂಲಕ ಸಂಘಟಿಸಿ, ಸ್ವಸಹಾಯ ಗುಂಪುಗಳ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವುದು. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇ.50ರಷ್ಟು ಸಹಾಯಧನ, ಗರಿಷ್ಠ 5,000 ರೂ.ವನ್ನು ಪ್ರತಿ ಫಲಾನುಭವಿಗೆ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವ-ಸಹಾಯ ಗುಂಪುಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇದರ ಸಾಲಕ್ಕೆ ಬಡ್ಡಿದರ ಶೇ.4 ಆಗಿರುತ್ತದೆ.

ಕೃಷಿ ಭೂಮಿ ಖರೀದಿ ಯೋಜನೆ: ಈ ಯೋಜನೆಯಡಿ ನಿಗಮ ಕೃಷಿ ಭೂಮಿಯನ್ನು ಖರೀದಿಸಿ, ಗ್ರಾಮೀಣ ಪ್ರದೇಶದಲ್ಲಿರುವ ಭೂಮಿ ರಹಿತ ಅಲ್ಪಸಂಖ್ಯಾತ ಬಡ ರೈತರಿಗೆ ಒದಗಿಸುತ್ತದೆ. ಪ್ರತಿ ಫಲಾನುಭವಿಗೆ ಎರಡು ಎಕರೆ ಖುಷ್ಕಿ ಅಥವಾ ಒಂದು ಎಕರೆ ತರಿ ಭೂಮಿಯನ್ನು ಖರೀದಿಸಲು 10 ಲಕ್ಷ ರೂ.ಮಿತಿಗೊಳಿಸಿ ಶೇ.50ರಷ್ಟು ಸಾಲ ಹಾಗೂ ಇಳಿದ ಶೇ.50ನ್ನು ಸಹಾಯಧನದ ರೂಪದಲ್ಲಿ ನೀಡಲಾಗುವುದು. ಫಲಾನುಭವಿಯು ತಾನು ಪಡೆದ ಸಾಲವನ್ನು ಶೇ.6ರ ಬಡ್ಡಿದರದಲ್ಲಿ 10 ವರ್ಷಗಳ ಅವಧಿಯಲ್ಲಿ ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಪಶುಸಂಗೋಪನಾ ಯೋಜನೆ:  ಈ ಯೋಜನೆಯಡಿ ಗ್ರಾಮೀಣ ಭಾಗದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದಲು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ.50ರಷ್ಟು ಸಹಾಯಧನ ಸೇರಿ ರೂ.40,000 ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಲ್ಲಿ ಮಹಿಳೆಯರಿಗೆ ಶೇ.100ರಷ್ಟು ಮೀಸಲಾತಿ ನೀಡಲಾಗುವುದು.

ಟ್ಯಾಕ್ಸಿ-ಗೂಡ್ಸ್ ವಾಹನ ಖರೀದಿ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತರು ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ-ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿ ಖರೀದಿಸುವ ವಾಹನದ ಮೌಲ್ಯ 4 ಲಕ್ಷ ರೂ.ನಿಂದ 7.5 ಲಕ್ಷ ರೂ.ಗಳಿರಬೇಕು. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಪ್ರವಾಸಿ ಸ್ವಯಂ ಉದ್ಯೋಗ ಯೋಜನೆ: ಕೊಲ್ಲಿ ರಾಷ್ಟ್ರಗಳಿಗೆ ರಾಜ್ಯದಿಂದ ಉದ್ಯೋಗ ಅರಸಿ ಹೋಗಿ ಬಳಿಕ ಅಲ್ಲಿಂದ ಹಿಂದಿರುಗಿ ಬರುವ ಉದ್ಯೋಗಾವಕಾಶ ವಂಚಿತ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕೇರಳ ರಾಜ್ಯ ಮಾದರಿಯಲ್ಲಿ 10 ಲಕ್ಷ ರೂ.ಗಳ ಸಾಲವನ್ನು ಶೇ.5ರ ಬಡ್ಡಿದರದಲ್ಲಿ ಕೊಲ್ಯಾಟರಲ್ ಭದ್ರತೆಯೊಂದಿಗೆ ನಿಗಮದಿಂದ ಸಾಲದ ರೂಪದಲ್ಲಿ ನೀಡಲಾಗುವುದು. ನಿಗಮದ ಸಾಲವನ್ನು 7 ವರ್ಷದೊಳಗೆ ಮರುಪಾವತಿ ಮಾಡಬೇಕಾಗುತ್ತದೆ.

ಅರ್ಜಿ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರ ಕಚೇರಿ,‘ಎ’ ಬ್ಲಾಕ್, 1ನೇ ಮಹಡಿ, ಕೊಠಡಿ ನಂ.ಎ207, ರಜತಾದ್ರಿ, ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜೂ.30ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:0820-2574990ನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News