ಶಾಂಘಾ ಶೃಂಗಸಭೆ: ಶರೀಫ್-ಕ್ಸಿಜಿನ್ ಪಿಂಗ್ ಭೇಟಿ ದೃಢಪಡಿಸಿದ ಚೀನಾ

Update: 2017-06-12 14:33 GMT

 ಬೀಜಿಂಗ್,ಜೂ.12: ಬಲೂಚಿಸ್ತಾನದಲ್ಲಿ ಇಬ್ಬರು ಚೀನಿ ಪ್ರಜೆಗಳ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕ್ ಪ್ರಧಾನಿ ನವಾಝ್ ಶರೀಫ್ ಅವರನ್ನು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಓ)ಯ ಶೃಂಗಸಭೆಯ ವೇಳೆ ಭೇಟಿ ಮಾಡಲಿಲ್ಲವೆಂಬ ವರದಿಗಳನ್ನು ಚೀನಾ ತಳ್ಳಿಹಾಕಿದ್ದು, ಅವು ‘ವಿವೇಚನರಹಿತ’ವೆಂದು ಹೇಳಿದೆ.

   ಈ ಬಗ್ಗೆ ಚೀನಾದ ವಿದೇಶಾಂಗ ವಕ್ತಾರ ಲು ಕುಂಗ್ ಹೇಳಿಕೆ ನೀಡಿದ್ದು, ‘‘ಎಸ್‌ಸಿಓ ರಾಷ್ಟ್ರನಾಯಕರ ಸಮಾವೇಶದ ವೇಳೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕ್ ಪ್ರಧಾನಿ ನವಾಝ್ ಶರೀಫ್’ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದರು’’ ಎಂದು ತಿಳಿಸಿದ್ದಾರೆ. ಆದರೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದರೇ ಎಂಬುದನ್ನು ಅವರು ತಿಳಿಸಿಲ್ಲ. ಎಸ್‌ಸಿಓ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರು, ಪಾಕ್ ಪ್ರಧಾನಿ ನವಾಝ್ ಶರೀಫ್‌ರನ್ನು ಭೇಟಿಯಾಗಿಲ್ಲವೆಂಬುದಾಗಿ ಪ್ರಕಟವಾದ ಕೆಲವು ವರದಿಗಳು ‘ವಿವೇಚನಾರಹಿತ ಹಾಗೂ ಅನಪೇಕ್ಷಣೀಯ’ ಎಂದು ಲು ಕುಂಗ್ ಬಣ್ಣಿಸಿದರು. ಚೀನಾ ಹಾಗೂ ಪಾಕಿಸ್ತಾನವು ಸರ್ವಋತುವಿನಲ್ಲೂ ವ್ಯೆಹಾತ್ಮಕ ಪಾಲುದಾರಿಕೆ’ಯನ್ನು ಹೊಂದಿವೆ’’ ಎಂದವರು ಬಣ್ಣಿಸಿದರು.

 ಆದಾಗ್ಯೂ ಎಸ್‌ಸಿಓ ಶೃಂಗಸಭೆಯ ವೇಳೆ ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳು ಕ್ಸಿಜಿನ್ ಪಿಂಗ್ ಅವರು ಕಝಕಸ್ತಾನದ ಅಧ್ಯಕ್ಷ ನಝರ್‌ಬಯೆವ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ನಡೆಸಿದ ಮಾತುಕತೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದವು.ಚೀನಾದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಕೂಡಾ ಶರೀಫ್‌ರನ್ನು ಹೊರತುಪಡಿಸಿ ಇತರ ಎಸ್‌ಸಿಓ ನಾಯಕರ ಜೊತೆ ಕ್ಸಿಜಿನ್ ನಡೆಸಿದ ದ್ವಿಪಕ್ಷೀಯ ಮಾತುಕತೆಗಳ ಕುರಿತಾದ ಛಾಯಾಚಿತ್ರಗಳನ್ನು ಪ್ರಕಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News