ಬೆಳ್ತಂಗಡಿ: ಒಂದೇ ವಾರದಲ್ಲಿ ಕಿತ್ತು ಹೋದ ರಸ್ತೆ

Update: 2017-06-12 18:41 GMT

ಬೆಳ್ತಂಗಡಿ, ಜೂ. 12: ನಾವೂರು ಗ್ರಾಮದ ಕೈಕಂಬದಿಂದ ಪಾರೆಸ್ಟ್ ಬಂಗೆ ಸಂಪರ್ಕಿಸುವ 50 ಲಕ್ಷ ರೂ. ಅನುದಾನದಲ್ಲಿ ಮಾಡಲಾದ ಡಾಮರೀಕರಣ ಒಂದೇ ವಾರದಲ್ಲಿ ಮಳೆಗೆ ಕಿತ್ತು ಹೋಗಿದ್ದು ಮಂಜೂರಾದ ಅನುದಾನ ಈ ಭಾಗದ ಜನರಿಗೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.

ಕಳೆದ ಹಲವಾರು ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಈ ರಸ್ತೆಯನ್ನು ಸುಮಾರು ಇನ್ನೂರು ಕುಟುಂಬಗಳು ಉಪಯೋಗಿಸುತ್ತಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಸುಮಾರು 22 ಕುಟುಂಬಗಳು ಇದೇ ರಸ್ತೆಯನ್ನೇ ಅವಲಂಭಿಸಿದ್ದಾರೆ. ಕೈಕಂಬದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿದೆ. ಇಲ್ಲಿನ ನಿವಾಸಿಗಳು ಸ್ವಂತ ವಾಹನ ಇದ್ದವರು ಕಷ್ಟ ಪಟ್ಟು ಬರುತ್ತಾರೆ. ಉಳಿದವರು ಖಾಸಗಿ ವಾಹನವನ್ನೇ ಅವಲಂಭಿಸಬೇಕಾಗಿದೆ. ರಸ್ತೆ ಹದಗೆಟ್ಟ ಕಾರಣ ವಾಹನ ಸಂಚಾರ ಕಷ್ಟ ಸಾಧ್ಯವಾಗಿತ್ತು. ಕೈಕಂಬದಿಂದ ಸುಮಾರು 7 ಕಿ.ಮೀ. ದೂರದ ಎರ್ಮಲೆ ಎಂಬಲ್ಲಿಗೆ, ಪರಾರಿ, ಕಣಾಲು, ಕುಂಡಡ್ಕ, ಬಾಲ್ತಾರಾ, ಗೊರ್ಮೆಲು, ಮಲ್ಲ, ಅಲ್ಯ, ಪುಳಿತ್ತಡಿ ಮುಖೇನ ಹಾದು ಹೋಗುವ ರಸ್ತೆಯು ಸುಳ್ಯೋಡಿ (4 ಕಿ.ಮೀ.) ಎಂಬಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಕುಂಡ್ಯಡ್ಕ ಅಂಗನವಾಡಿ ಕೇಂದ್ರ ಮತ್ತು  ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಮಲೆಕುಡಿಯ  ಜನರನ್ನು ಹಾಗೂ ಇತರರನ್ನು ಸಂಪರ್ಕಿಸುವ ರಸ್ತೆಯ ನಾದುರಸ್ತಿಯಲ್ಲಿದ್ದ ರಸ್ತೆ ಡಾಮರೀಕರಣಗೊಂಡು ಇದೀಗ ಮಳೆಗೆ ಮತ್ತೆ ಅದೇ ಸ್ಥಿತಿಗೆ ತಲುಪುವಂತಾಗಿದೆ.

ಸುಮಾರು ಮೂವತ್ತೈದು ವರ್ಷಗಳಿಂದ ಡಾಮರು ಕಾಣದ ಈ ರಸ್ತೆಯ ದುರಸ್ತಿಗಾಗಿ ಸಾರ್ವಜನಿಕರು ಜನಪ್ರತಿನಿಧಿ ಗಳಿಗೆ ಮನವಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ. ಈ ರಸ್ತೆಯ ಬಗ್ಗೆ ಹಲವಾರು ವರ್ಷಗಳಿಂದ ಮನವಿ ನೀಡಲಾಗಿದ್ದರೂ ಸ್ಪಂದಿಸದ ಕಾರಣ ಕಳೆದ ತಾಪಂ., ಜಿಪಂ ಚುನಾವಣೆ ಬಹಿಷ್ಕಾರಕ್ಕೆ ಮನ ಮಾಡಿದ್ದರು.  ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಸ್ಥಳೀಯರು ಬ್ಯಾನರ್‌ನ್ನು ಅಳವಡಿಸಿದ್ದರು.
ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ಕೂಡಾ ಮಾಡಿದ್ದರು. ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತುಕೊಂಡು ನಬಾರ್ಡ್ ಯೋಜನೆಯಡಿ 50 ಲಕ್ಷ ರೂ. ಮಂಜೂರುಗೊಂಡಿತ್ತು. ಹಲವು ವರ್ಷಗಳ ಬಳಿಕ ಜಲ್ಲಿ ಕಲ್ಲಿನಲ್ಲಿ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದ ಈ ಭಾಗದ ಜನರಿಗೆ ರಸ್ತೆ ಡಾಮರೀಕರಣ ಸ್ವಲ್ಪ ಮಟ್ಟಿಗೆ ಖುಷಿ ತಂದಿತು. 50 ಲಕ್ಷ ರೂ. ವೆಚ್ಚದ 1.20 ಕಿ.ಮೀ. ರಸ್ತೆ ಡಾಮರೀಕರಣ ಮಳೆಗಾಲದ ಜೂನ್ ತಿಂಗಳ ಮೊದಲ ವಾರದಲ್ಲಿ ಆಗಿತ್ತು. ಅದಾದ ಒಂದೇ ವಾರದಲ್ಲಿ ಮಳೆಯ ನೀರಿಗೆ ರಸ್ತೆ ಕಿತ್ತು ಹೋಗಲು ಆರಂಭವಾಗಿದೆ. ಮಳೆಗಾಲದಲ್ಲಿ ಕಾಮಗಾರಿಯನ್ನು ಮಾಡಿದ್ದರಿಂದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ. ಕಳಪೆ ಕಾಮಗಾರಿಯ ವಿರುದ್ದ ಕ್ರಮ ಕೈಗೊಳ್ಳಬೇಕು, ಮರು ಡಾಮರೀಕರಣ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಪ್ರತಿಭಟನೆ, ಹೋರಾಟದ ಬಳಿಕ ರಸ್ತೆ ಡಾಮರೀಕರಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆ ಆಯಿತು. ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮಳೆಗಾಲ ಆರಂಭವಾದ ಬಳಿಕ ಮಾಡಿದ ಡಾಮರೀಕರಣ ಐದು ದಿನಗಳಲ್ಲಿಯೇ ಎದ್ದು ಹೋಗಿದೆ. ಗುತ್ತಿಗೆದಾರರು ಮರು ಡಾಮರೀಕರಣ ಮಾಡಬೇಕು ಮತ್ತು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಬೇಕು. ತಪ್ಪಿದರೆ ನಾವು ಮತ್ತೆ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ.- ಹರಿಶ್ಚಂದ್ರ ಕೈಕಂಬ, ಸ್ಥಳೀಯ ನಿವಾಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News