ರೈತರ ಬಗ್ಗೆ ಉಡಾಫೆ ತೋರಿದರೆ ಪ್ರತೀದಿನ ಪ್ರೆಸ್‌ಮೀಟ್ ಮಾಡಿ ತರಾಟೆ: ಸಿಎಂಗೆ ಪೂಜಾರಿ ಎಚ್ಚರಿಕೆ

Update: 2017-06-13 10:10 GMT

ಮಂಗಳೂರು, ಜೂ.13: ರೈತರ ಪರಿಸ್ಥಿತಿ ಬಗ್ಗೆ ಉಡಾಫೆ ಮಾಡಬೇಡಿ. ರೈತರ ಸಾಲ ಮನ್ನಾ ಮಾಡಿ. ಇಲ್ಲದಿದ್ದರೆ ಪಕ್ಷ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗಬಹುದು. ಆದ್ದರಿಂದ ಮಾನವೀಯ ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಪ್ರತೀದಿನ ಪತ್ರಿಕಾಗೋಷ್ಠಿ ಕರೆದು ತರಾಟೆಗೆತ್ತಿಕೊಳ್ಳುವುದು ಅನಿವಾರ್ಯವಾದೀತು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮುಖ್ಯಮಂತ್ರಿಯನ್ನು ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೇರೆ ರಾಜ್ಯಗಳಿಗೂ ಮಾದರಿಯಾಗಿ ಎಂದು ಸಿದ್ದರಾಮಯ್ಯರಿಗೆ ಕಿವಿಮಾತು ಹೇಳಿದರು.

ಸಾಲ ಮನ್ನಾ ಮಾಡಲಾಗದಿದ್ದರೆ ರಾಜೀನಾಮೆ ನೀಡಿ

ಮಂಡ್ಯದಲ್ಲಿ ರೈತ ಬೆತ್ತಲೆಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದು ದೇಶಕ್ಕೆ ಅವಮಾನಕಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರೈತರ ಸಾಲ ಮನ್ನಾ ಮಾಡಬೇಕು, ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕು ಎಂದು ಪೂಜಾರಿ ಒತ್ತಾಯಿಸಿದರು.

ಮಂಡ್ಯದ ಘಟನೆ ದೇಶದ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ನಾಚಿಕೆ ಪಡುವ ವಿಷಯ. ರೈತ ಬೆತ್ತಲಾಗಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಮಾಧ್ಯಮಗಳ ಮೂಲಕ ವಿಶ್ವವೇ ನೋಡಿದೆ. ಮನುಷ್ಯನಾದವನಿಂದ ಇದನ್ನು ನೋಡಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆ ಆಗದಿರಲು ರೈತರ ಸಾಲ ಮನ್ನಾ ಮಾಡಬೇಕು. ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದರು.

ಸಿದ್ದರಾಮಯ್ಯ ಅವರೇ, ಇದು ಸುಮ್ಮನೆ ಕುಳಿತುಕೊಳ್ಳುವ ಸಮಯ ಅಲ್ಲ. ಇಂದು ಸಾಲ ಮನ್ನಾ ಮಾಡಿದರೆ ಬೇರೆ ರಾಜ್ಯಗಳಿಗೆ ನೀವು ಮಾದರಿ ಆಗುತ್ತೀರಿ. ಸಾಲ ಮನ್ನಾ ಮಾಡದಿದ್ದರೆ ಪ್ರತೀ ದಿನ ನಿಮ್ಮ ವಿರುದ್ಧ ಅಟ್ಯಾಕ್ ಮಾಡುತ್ತೇನೆ ಎಂದವರು ಹೇಳಿದರು. ಬರಗಾಲದಿಂದ ತತ್ತರಿಸಿರುವ ರಾಜ್ಯಜದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಮಾಡಿಲ್ಲ. ಸಾಲಮನ್ನಾ ವಿಷಯದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬೇಡ. ನಿಮಗೆ ಮೊದಲು ಸಾಲ ಮನ್ನಾ ಮಾಡಬಹುದು. ಕೇಂದ್ರ ಸರ್ಕಾರ ಅವರ ಪಾಲು ಕೊಡದಿದ್ದರೆ ಬಳಿಕ ನಾನೂ ಕೇಂದ್ರದ ವಿರುದ್ಧ ಆರೋಪ ಮಾಡುತ್ತೇನೆ. ಅವರ ಪಾಲು ನೀಡುವಂತೆ ಒತ್ತಾಯಿಸುತ್ತೇನೆ. ನಾನು ಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೆ ಎಂದರು.

ಕೇಂದ್ರ ಸರ್ಕಾರ ಸಾಲ ಮನ್ನಾ ಹಣ ತುಂಬಿಕೊಡದು ಎಂಬ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರುವುದು ಸರಿಯಲ್ಲ. ಅವರಿಗೆ ಆಡಳಿತ ನಡೆಸುವ ಸಾಮರ್ಥ್ಯ ಇಲ್ಲ. ಜೇಟ್ಲಿ ರಾಜೀನಾಮೆ ನೀಡಬೇಕು ಎಂದು ಪೂಜಾರಿ ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಮುಂದುವರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೂಜಾರಿ, ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಇಬ್ಬರು ಕಾರ್ಯಾಧ್ಯಕ್ಷರನ್ನು ನೇಮಿಸಿರುವುದೂ ಪಕ್ಷದ ನಿರ್ಧಾರ. ಹೈಕಮಾಂಡ್ ಪಕ್ಷದ ಹಿತದಿಂದ ಈ ನೇಮಕ ಮಾಡಿದೆ ಎಂದರು.

ಶಾಸಕ ಮೊಯ್ದಿನ್ ಬಾವ ಮಕ್ಕಳಿಗೆ ನೋಟ್ ಪುಸ್ತಕ ನೀಡಿರುವುದು ಒಳ್ಳೆಯ ಕೆಲಸ. ಶಾಸಕನಾಗಿ ಅವರು ಆ ಕೆಲಸ ಮಾಡಲಿ. ಆದರೆ, ತಲೆ ಇದ್ದರೆ ಅವರು ಪುಸ್ತಕದಲ್ಲಿ ತನ್ನ ೆಟೊ ಹಾಕುತ್ತಿರಲಿಲ್ಲ. ಪುಸ್ತಕದಲ್ಲಿ ೆಟೊ ಹಾಕುವ ಮೂಲಕ ಜನರಿಗೆ ಅವರ ಪರಿಚಯ ಇಲ್ಲ ಎಂದಾಯಿತು ಎಂದು ಪೂಜಾರಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News