ಗುಟ್ಕಾ ತಿನ್ನುತ್ತಿದ್ದ ವರನನ್ನು ತಿರಸ್ಕರಿಸಿದ ಮದುಮಗಳು
ಬಲಿಯಾ(ಉ.ಪ್ರ),ಜೂ.13: ಗುಟ್ಕಾ ತಿನ್ನುತ್ತಿದ್ದ ವರನನ್ನು ಮದುವೆಯಾಗಲು ಮದುಮಗಳು ನಿರಾಕರಿಸಿದ ಘಟನೆ ಬಲಿಯಾ ಜಿಲ್ಲೆಯ ಮುರಪತ್ತಿ ಗ್ರಾಮದಲ್ಲಿ ನಡೆದಿದೆ. ಇದರಿಂದ ವರ ಕಕ್ಕಾಬಿಕ್ಕಿಯಾಗಿದ್ದರೆ, ಆತನ ಮತ್ತು ವಧುವಿನ ಕುಟುಂಬಗಳು ಆಘಾತಕ್ಕೊಳಗಾಗಿದ್ದವು.
ಕಳೆದ ವಾರಾಂತ್ಯದಲ್ಲಿ ಈ ಘಟನೆ ನಡೆದಿದೆ. ದಾಲನ್ ಚಾಪರಾ ಗ್ರಾಮದ ನಿವಾಸಿ ಯಾಗಿರುವ ವರ ತನ್ನ ಬಾರಾತ್(ದಿಬ್ಬಣ)ನೊಂದಿಗೆ ಮದುವೆ ಸ್ಥಳವನ್ನು ತಲುಪಿದಾಗ ವಧುವಿನ ಕಡೆಯವರು ಅದ್ದೂರಿ ಸ್ವಾಗತವನ್ನು ಕೋರಿದ್ದರು. ಆದರೆ ಮದುವೆಯ ವಿಧಿಗಳಿಗಾಗಿ ಮಂಟಪದೊಳಕ್ಕೆ ಹೆಜ್ಜೆಯಿರಿಸುತ್ತಿದ್ದಂತೆ ಆತ ಗುಟ್ಕಾ ಅಗಿಯುತ್ತಿದ್ದನ್ನು ಪತ್ತೆ ಹಚ್ಚಿದ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ವಧು ಸ್ಥಳೀಯ ಕಾಲೇಜಿನಲ್ಲಿ ಬಿಎ ವಿದ್ಯಾರ್ಥಿನಿಯಾಗಿದ್ದು, ಆಕೆಯ ನಿರ್ಧಾರ ಬಂಧುಗಳನ್ನು ಸ್ತಂಭೀಭೂತರನ್ನಾಗಿಸಿತ್ತು. ಉಭಯ ಕುಟುಂಬಗಳ ಬಂಧುಗಳು ಮತ್ತು ಸ್ನೇಹಿತರು ರಾತ್ರಿಯಿಡೀ ಮಾತುಕತೆ ನಡಸಿದರಾದರೂ ಹುಡುಗಿ ತನ್ನ ನಿರ್ಧಾರವನ್ನು ಬದಲಿಸುವಂತೆ ಮಾಡಲು ಸಾಧ್ಯವಾಗಲಿಲ್ಲ.
ವರನ ಕಡೆಯವರು ದೋಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಾದರೂ ಹುಡುಗಿ ಗುಟ್ಕಾದಾಸನನ್ನು ಮದುವೆಯಾಗದಿರುವ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಪೊಲೀಸರೂ ಏನೂ ಮಾಡುವಂತಿರಲಿಲ್ಲ. ಕೊನೆಗೂ ವರ ಬಂದ ದಾರಿಗೆ ಸುಂಕವಿಲ್ಲದೆ ತನ್ನ ಗ್ರಾಮಕ್ಕೆ ಮರಳಿದ್ದಾನೆ.