ನಾಳೆ ಟ್ರಂಪ್ ಹುಟ್ಟುಹಬ್ಬವನ್ನು ಆಚರಿಸಲಿರುವ ಹಿಂದು ಸೇನಾ

Update: 2017-06-13 12:34 GMT

ಹೊಸದಿಲ್ಲಿ,ಜೂ.13 : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ಮಾನವ ಜನಾಂಗದ ರಕ್ಷಕ’ ಎಂದು ಬಣ್ಣಿಸುವ ಹಿಂದು ಸೇನಾ ಎಂಬ ಸಂಘಟನೆ ಟ್ರಂಪ್ ಅವರ ಹುಟ್ಟುಹಬ್ಬವನ್ನು ನಾಳೆ ರಾಜ್ ತಿಲಕ್ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಆಚರಿಸಲಿದೆ.

 ಟ್ರಂಪ್ ಅವರು ನಾಳೆ 71ನೇ ವಯಸ್ಸಿಗೆ ಕಾಲಿಡಲಿದ್ದಾರೆ.

ಹಿಂದು ಸೇನಾ ಸಂಘಟನೆ ಕಳೆದ ವರ್ಷ ಕೂಡ ಅವರ ಹುಟ್ಟು ಹಬ್ಬವನ್ನು ಆಚರಿಸಿತ್ತು.

ನಾಳೆ ಜಂತರ್ ಮಂತರ್ ನಲ್ಲಿ ಆಯೋಜಿಸಲಾಗುವ ಟ್ರಂಪ್ ಹುಟ್ಟುಹಬ್ಬದಲ್ಲಿ ಅಮೆರಿಕಾ ಅಧ್ಯಕ್ಷರ ಫೋಟೋ ಪ್ರದರ್ಶನವೊಂದು ನಡೆಯಲಿದೆ. ಈ ಕಾರ್ಯಕ್ರಮದ ಪ್ರಚಾರಾರ್ಥ ಅಂಟಿಸಲಾಗಿರುವ ಪೋಸ್ಟರ್ ಒಂದರಲ್ಲಿ ಟ್ರಂಪ್ ಅವರು ಸಣ್ಣ ಹುಡುಗನಾಗಿದ್ದಾಗಿನ ಫೋಟೋ ಮತ್ತು ಈಗಿನ ಫೋಟೋದ ಸುತ್ತಮುತ್ತ ಹಲವಾರು ಬಲೂನುಗಳನ್ನು ತೋರಿಸಲಾಗಿದೆ. ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸೇನಾ ಈ ಪೋಸ್ಟರ್ ನ ಫೋಟೋ ಶೇರ್ ಮಾಡಿದೆ ಹಾಗೂ ಜನರನ್ನು ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

ಕಳೆದ ಬಾರಿಗಿಂತ ಈ ಬಾರಿ ದೊಡ್ಡ ಮಟ್ಟದಲ್ಲಿ ಸಮಾರಂಭ ಆಯೋಜಿಸಲಾಗುವುದು, ಎಂದು ಹಿಂದು ಸೇನಾ ಅಧ್ಯಕ್ಷ ವಿಷ್ಣು ಗುಪ್ತ ಹೇಳಿದ್ದಾರೆ.

ಇದೇ ಸಂಘಟನೆ ಕಳೆದ ವರ್ಷ ಮೇ 2016ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಿಂತ ಮುಂಚೆ ಟ್ರಂಪ್ ವಿಜಯಕ್ಕಾಗಿ ಹೋಮವೊಂದನ್ನೂ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News