ಸಚಿವೆ ಸ್ಮೃತಿಗೆ ಬಳೆಯೆಸೆದು ‘ರೈತ’ನ ಪ್ರತಿಭಟನೆ
ಅಹ್ಮದಾಬಾದ್,ಜೂ.12: ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮೇಲೆ ಯುವಕನೊಬ್ಬ ಬಳೆಗಳನ್ನು ಎಸೆದ ಘಟನೆ ಗುಜರಾತ್‌ನ ಅಮ್ರೇಲಿ ನಗರದಲ್ಲಿ ಮಂಗಳವಾರ ನಡೆದಿದೆ.
ಈ ಕಿಡಿಗೇಡಿ ಕೃತ್ಯವನ್ನು ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದು ಆತನನ್ನು ಅಮ್ರೇಲಿ ಜಿಲ್ಲೆಯ ಮೋಚಾ ಭಂಡಾರಿಯಾ ಗ್ರಾಮದ ನಿವಾಸಿ ಕೇತನ್ ಕಸ್ವಾಲಾ ಎಂದು ಗುರುತಿಸಲಾಗಿದೆ. ನರೇಂದ್ರ ಮೋದಿ ಸರಕಾರಕ್ಕೆ ಮೂರು ವರ್ಷಗಳು ತುಂಬಿದ ಪ್ರಯುಕ್ತ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಸ್ಮೃತಿ ಇರಾನಿ ಭಾಷಣ ಮಾಡುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ಅಮ್ರೇಲಿ ಪೊಲೀಸ್ ಅಧೀಕ್ಷಕ ಜಗದೀಶ್ ಪಟೇಲ್ ತಿಳಿಸಿದ್ದಾರೆ.
ಸಚಿವೆ ಭಾಷಣ ಮಾಡುತ್ತಿದ್ದಾಗ, ವೇದಿಕೆಯಿಂದ ತುಂಬಾ ದೂರದಲ್ಲಿ ಕುಳಿತಿದ್ದ ಕಸ್ವಾಲಾ ಹಠಾತ್ತನೆ ಎದ್ದು, ವೇದಿಕೆಯೆಡೆಗೆ 2-3 ಬಳೆಗಳನ್ನು ಎಸೆದು, ವಂದೇ ಮಾತರಂ ಎಂದು ಘೋಷಣೆ ಕೂಗಿದ. ಆದರೆ ವೇದಿಕೆ ತುಂಬಾ ದೂರವಿದ್ದುದರಿಂದ, ಬಳೆಗಳು ಅಲ್ಲಿಗೆ ಬಂದು ಬೀಳಲಿಲ್ಲ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ಕೊಂಡೊಯ್ದರೆಂದು ಜಗದೀಶ್ ಪಟೇಲ್ ತಿಳಿಸಿದ್ದಾರೆ.
ಈ ಮಧ್ಯೆ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ರೈತ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂಬ ಎಂದು ಆಗ್ರಹಿಸಿ, ಕಸ್ವಾಲಾ ಸಚಿವೆಯತ್ತ ಬಳೆಗಳನ್ನು ಎಸೆದಿದ್ದಾನೆಂದು ಹೇಳಿದೆ. ಆದರೆ ಪೊಲೀಸರು ಅದನ್ನು ನಿರಾಕರಿಸಿದ್ದು, ಆತ ಕಾಂಗ್ರೆಸ್ ಅಥವಾ ಇತರ ಯಾವುದೇ ಸಂಘಟನೆಗೆ ಸೇರಿದವನಲ್ಲವೆಂದು ತಿಳಿಸಿದ್ದಾರೆ. ಆತ ವಂದೇಮಾತರಂ ಹೊರತಾಗಿ ಬೇರ್ಯಾವುದೇ ಘೋಷಣೆ ಕೂಗಿಲ್ಲವೆದು ಅವರು ಹೇಳಿದ್ದಾರೆ.
ಪೊಲೀಸರು ಕಸ್ವಾಲ್‌ನನ್ನು ಎಳೆದೊಯ್ದಾಗಲೂ ಆತನಿಗೆ ಸಭೆಯಲ್ಲಿ ಭಾಗವಹಿಸಲು ಬಿಡುವಂತೆ ಸಚಿವೆ ಅವರಿಗೆ ಸೂಚಿಸಿರು.
‘‘ಆತನಿಗೆ ಬಳೆಗಳನ್ನು ಎಸೆಯಲು ಬಿಡಿ. ನಾನದನ್ನು ಆತನ ಪತ್ನಿಗೆ ಉಡುಗೊರೆಯಾಗಿ ಕಳುಹಿಸುವೆ ’’ ಎಂದು ಸ್ಮೃತಿ ಇರಾನಿ ಪೊಲೀಸರಿಗೆ ತಿಳಿಸಿದರೆಂದು ಪಟೇಲ್ ಹೇಳಿದರು. ಕೃಷಿ ವಿಶ್ವವಿದ್ಯಾನಿಲಯದ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುನ್ನ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 25 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಕಸ್ವಾಲಾ ರೈತನಾಗಿದ್ದು, ಗುಜರಾತ್ ಸರಕಾರವು ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂಬ ಆಗ್ರಹಿಸಿ ಆತ ಇರಾನಿ ಮೇಲೆ ಬಳೆಗಳನ್ನು ಎಸೆದಿದ್ದಾನೆಂದು ಸ್ಥಳೀಯ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ತಿಳಿಸಿದ್ದಾರೆ. ಉತ್ತರಪ್ರದೇಶ ಮಹಾರಾಷ್ಟ್ರದ ಬಿಜೆಪಿ ಸರಕಾರಗಳು ರೈತ ಸಾಲ ಮನ್ನಾ ಮಾಡಿವೆ. ಆದರೆ ಗುಜರಾತ್ ಸರಕಾರ ಮಾತ್ರ ಸಾಲ ಮನ್ನಾವನ್ನು ಘೋಷಿಸದಿರುವುದಕ್ಕಾಗಿ ಆತ ತನ್ನ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾನೆಂದು ಅವರು ಹೇಳಿದ್ದಾರೆ.