ಸಹಜ ಸ್ಥಿತಿಗೆ ಮರಳಿದ ಕನ್ಯಾನ: ಮೂವರ ಬಂಧನ

Update: 2017-06-14 03:43 GMT

ಬಂಟ್ವಾಳ, ಜೂ. 14: ಇತ್ತಂಡಗಳ ನಡುವೆ ಸೋಮವಾರ ಸಂಜೆ ನಡೆದ ಘರ್ಷಣೆಯಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕರೋಪಾಡಿ ಗ್ರಾಮದ ಮುಗುಳಿ ಮತ್ತು ಕನ್ಯಾನ ಪೇಟೆ ಸಹಜ ಸ್ಥಿತಿಗೆ ಮರಳಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಕನ್ಯಾನ ಗ್ರಾಮದ ಅಬ್ದುಲ್ ರಹೀಂ, ಮುಹಮ್ಮದ್ ಇರ್ಷಾದ್ ಹಾಗೂ ಶಿಬಾಜೆ ಬೇಂಗಳ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಮುಗುಳಿ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಶಿಬಾಜೆ ಬೇಂಗಳ ನಿವಾಸಿ ರಾಧಾಕೃಷ್ಣ, ನಾಗೇಶ, ಹರೀಶ ಎಂಬವರು "ದನ ಸಾಗಾಟ ಮಾಡುತ್ತೀಯಾ" ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೇಲೆ ರಾಡ್‍ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಕನ್ಯಾನ ಗ್ರಾಮದ ಕುಕ್ಕಾಜೆ ನಿವಾಸಿ ಮುಹಮ್ಮದ್ ಹನೀಫ್ ಎಂಬವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. 

ಅದೇ ರೀತಿ ರಹೀಂ, ಇರ್ಷಾದ್, ಮುಹಮ್ಮದ್ ಅನ್ಸಾರ್ ಹಾಗೂ ಇತರ ಮೂವರ ತಂಡ ಮನೆಗೆ ನುಗ್ಗಿ ತನಗೆ ಹಲ್ಲೆ ನಡೆಸಿದೆ ಎಂದು ಶಿಬಾಜೆ ಬೇಂಗಳ ನಿವಾಸಿ ರಾಧಾಕೃಷ್ಣ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಇತ್ತಂಡಗಳ ವಿರುದ್ಧ ದೂರು-ಪ್ರತಿದೂರು ದಾಖಲಿಸಿರುವ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಎರಡು ಗುಂಪುಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ನಡೆದ ಘಟನೆ ಇದಾಗಿದ್ದು, ಯಾವುದೇ ಕೋಮಿಗೆ ಸಂಬಂಧಿಸಿದ ವಿಚಾರವಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಸ್ಪಷ್ಟಪಡಿಸಿದ್ದಾರೆ. 

ಘಟನಾ ಸ್ಥಳದಲ್ಲಿ ಸೋಮವಾರ ಸಂಜೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿ ಎಸ್ಪಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ರಾತ್ರಿ ಸಮಯ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News