ಕಲ್ಲಡ್ಕದಲ್ಲಿ ಮರುಕಳಿಸುತ್ತಿರುವ ಕೋಮು ದಳ್ಳುರಿಗೆ ಸರಕಾರವೇ ನೇರ ಹೊಣೆ: ಎಸ್ ಡಿಪಿಐ

Update: 2017-06-14 07:21 GMT

ಮಂಗಳೂರು, ಜೂ.14: ಪವಿತ್ರ ರಮಝಾನ್ ತಿಂಗಳಿನ ಆರಂಭದಿಂದಲೇ ಕಲ್ಲಡ್ಕದಲ್ಲಿ ಅಮಾಯಕ ಮುಸ್ಲಿಂ ಯುವಕನ ಕೊಲೆಯತ್ನ ನಡೆಸಿ ಇಡೀ ಕಲ್ಲಡ್ಕ ಪರಿಸರದಲ್ಲಿ ಅಶಾಂತಿ ಸೃಷ್ಟಿಸಿ 20 ದಿವಸಗಳಾದರೂ ಇದುವರೆಗೆ ಸರಕಾರಕ್ಕೆ, ಪೊಲೀಸ್ ಇಲಾಖೆಗೆ ಸಂಘಪರಿವಾರದ ಗೂಂಡಾಗಳಾದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದೆ ಇರುವುದು ವಿಪರ್ಯಾಸವಾಗಿದೆ ಎಂದು ಎಸ್ ಡಿಪಿಐ ತಿಳಿಸಿದೆ.

ಕಲ್ಲಡ್ಕ ಪ್ರಭಾಕರ ಭಟ್ ನ ಹಿಂಬಾಲಕರಾಗಿರುವ ಗೂಂಡಾಗಳು ಹಿಂದಿನಿಂದಲೂ ಈ ರೀತಿಯ ಕೃತ್ಯಗಳನ್ನು ನಡೆಸುತ್ತಾ ಬಂದಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಸರಕಾರಕ್ಕೆ ಇವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇಂತಹ ಕೋಮು ಗಲಭೆಗಳು ನಿರಂತರ ನಡೆಯುತ್ತಿರಲು ಇದುವೆ  ಕಾರಣ. ಉಸ್ತುವಾರಿ ಸಚಿವರ ಸ್ವ ಕ್ಷೇತ್ರದಲ್ಲಿ ಕಳೆದ 20 ದಿವಸಗಳಿಂದ ಈ ರೀತಿಯ ಹಲವು ಘಟನೆಗಳು ಸಂಭವಿಸಿದರೂ ಸಚಿವರು ಮೌನ ವಹಿಸಿರುವುದರಿಂದ ಘಟನೆಗೆ ಸಮ್ಮತಿಯನ್ನು ಕೊಟ್ಟಿರುವಂತಹ ಸಂಶಯಗಳು ಎದ್ದು ಕಾಣುತ್ತಿದೆ ಎಂದು ಎಸ್ ಡಿಪಿಐ ಆರೋಪಿಸಿದೆ.

ಈ ರೀತಿಯ ಮೌನದಿಂದ ಮತ್ತು ಸಂಘಪರಿವಾರದ ಗೂಂಡಾಗಳನ್ನು ಬಂಧಿಸದೇ ಇದ್ದ ಕಾರಣದಿಂದ ಜೂನ್ 13ರಂದು ಮತ್ತೆ ಕಲ್ಲಡ್ಕದಲ್ಲಿ ಸಂಘಪರಿವಾರದ ಗುಂಪು ಖಲೀಲ್ ಎಂಬ ಯುವಕನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದೆ. ಇಷ್ಟೇ ಅಲ್ಲದೆ ಕಲ್ಲಡ್ಕದ ರಾಮ ಮಂದಿರದ ಮೇಲ್ಭಾಗದಿಂದ ಮಸೀದಿಗೆ ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ಎಸೆಯಲಾಗಿದೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಕೋಮು ದಳ್ಳುರಿಯನ್ನು ನಡೆಸಲು ಮೂಲ ಕಾರಣ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್. ಈ ರೀತಿಯ ಕೃತ್ಯವನ್ನು ಎಸಗುವ ಎಲ್ಲಾ ಆರೋಪಿಗಳಿಗೆ ಕಳೆದ ಹಲವು ವರ್ಷಗಳಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾಲಯ ಅಡಗುದಾಣವಾಗಿದೆ. ಆದರೆ ಇದುವರೆಗೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಗಳನ್ನು ಪತ್ತೆಹಚ್ಚುವ ಧೈರ್ಯ ತೋರದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ ಎಂದು ಎಸ್ ಡಿಪಿಐ ಹೇಳಿದೆ.

ಯುವಕರಿಗೆ ಹಲ್ಲೆಗೈದು, ಮಸೀದಿಗೆ ಕಲ್ಲು ಮತ್ತು ಸೋಡಾ ಬಾಟಲಿಗಳನ್ನು ಎಸೆದು  ಸಾರ್ವಜನಿಕ ಆಸ್ತಿಗಳನ್ನು ನಷ್ಟ ಮಾಡಿರುವ ಸಂಘಪರಿವಾರದ ಗೂಂಡಾಗಳ ಮೇಲೆ ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರ ಮೇಲೆ ಸರಕಾರ ಮತ್ತು ಪೊಲೀಸ್ ಇಲಾಖೆ  ಕಠಿಣ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಹೋರಾಟವನ್ನು ನಡೆಸಲಾಗುವುದೆಂದು ಎಸ್ ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News