ರಕ್ತದಾನದಿಂದ ಸಮಾಜದ ಪರಿವರ್ತನೆ: ಸಂಸದ ನಳಿನ್

Update: 2017-06-14 09:01 GMT

ಮಂಗಳೂರು, ಜೂ.14: ರಕ್ತದಾನದಿಂದ ಒಬ್ಬ ವ್ಯಕ್ತಿಗೆ ಮರುಜೀವ ಕೊಡುವ ಜತೆಗೆ ಸಮಾಜದ ಪರಿವರ್ತನೆಯೂ ಸಾಧ್ಯ ಎಂದು ಲೋಕಸಭಾ ಸದಸ್ಯ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ನಗರದ ವೆನ್ಲಾಕ್ ಆಸ್ಪತ್ರೆಯ ಆರ್‌ಎಪಿಸಿಸಿ ಸಭಾಂಗಣದಲ್ಲಿ ಬುಧವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಕ್ತನಿಧಿ ಜಿಲ್ಲಾ ಶಾಖೆ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ-2017 ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ಲೋಕದಲ್ಲಿ ಮಹತ್ವದ ಆವಿಷ್ಕಾರಗಳಾಗಿವೆ. ಮಾನವನ ಅಂಗಾಂಗಗಳನ್ನು ಇತರರಿಗೆ ದಾನ ಮಾಡಿ ಜೀವ ಬದುಕಿಸಲು ಸಾಧ್ಯವಿದೆ. ಆದರೆ, ರಕ್ತಕ್ಕೆ ಬದಲಿ ಇನ್ನೂ ಕಂಡುಹಿಡಿಯಲಾಗಿಲ್ಲ . ಹಾಗಾಗಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ಕ್ಷಿಪ್ರಗತಿಯಲ್ಲಿ ಆಗಬೇಕಾಗಿದೆ ಎಂದವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ಆರ್.ರವಿ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಚೇರ್ ಮೆನ್ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಸಂಘ ಸಂಸ್ಥೆಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಕರಾವಳಿ ವಿಭಾಗದ ಸಮನ್ವಯಾಧಿಕಾರಿ ಡಾ. ಎಂ.ಅಣ್ಣಯ್ಯ ಕುಲಾಲ್ ಉಳ್ತೂರು, ವಿಜಯಾ ಬ್ಯಾಂಕ್ ಡಿಜಿಎಂ ಸುಧಾಕರ್ ನಾಯಕ್, ರೆಡ್‌ಕ್ರಾಸ್‌ನ ಉಪ ಚೇರ್ ಮೆನ್ ಡಾ. ಶಾಂತರಾಮ್ ಬಾಳಿಗಾ, ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News