ಈ ಎನ್‌ಆರ್‌ಐ ಕುಟುಂಬದ 9 ಮಕ್ಕಳೂ ವಾಯ್ಲಿನ್ ವಾದಕರು

Update: 2017-06-14 09:52 GMT

ವಿಶ್ವದ ಅತೀ ದೊಡ್ಡ ವಾಯ್ಲಿನ್ ವಾದಕ ಕುಟುಂಬವೆಂಬ ಹೆಗ್ಗಳಿಕೆ

ಮಂಗಳೂರು, ಜೂ. 14: ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮೂಲತ: ಮಂಗಳೂರಿನವರಾದ ಹೃದ್ರೋಗ ತಜ್ಞ ಡಾ. ಜೆರಾರ್ಡ್ ಅಬ್ರೆಯೊ ಕುಟುಂಬ ವಿಶ್ವದ ಅತೀ ದೊಡ್ಡ ವಾಯ್ಲಿನ್ ವಾದಕ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇವರ ಒಂಭತ್ತು ಮಕ್ಕಳು ಕೂಡಾ ವಾಯ್ಲಿನ್ ವಾದಕರು ಎಂಬುದು ವಿಶೇಷ. ಮಾತ್ರವಲ್ಲದೆ, ಈ ಕುಟುಂಬದ ಅತಿ ಕಿರಿಯ ಅಂದರೆ, 3ರ ಹರೆಯದ ಪುಟಾಣಿಯೂ ವಾಯ್ಲಿನ್ ತಂತಿಯನ್ನು ಮೀಟುತ್ತಾ ಇಂಪಾದ ನಾದವನ್ನು ಹೊರಹೊಮ್ಮಿಸುತ್ತದೆ.

ಪ್ರಸ್ತುತ ತಮ್ಮ ತವರೂರಾದ ಮಂಗಳೂರಿಗೆ ಕುಟುಂಬದೊಂದಿಗೆ ಆಗಮಿಸಿರುವ ಡಾ. ಜೆರಾರ್ಡ್ ಅಬ್ರೆಯೊ ಅವರು ನಗರದ ಸಿಟಿ ಸೆಂಟರ್ ಮಾಲ್‌ನ ಹಾಮ್ಸ್ ಮಾರ್ಟ್ ಮಳಿಗೆಯಲ್ಲಿ ತಮ್ಮ ಮಕ್ಕಳ ವಾಯ್ಲಿನ್ ವಾದನದ ಇಂಪನ್ನು ಮಾಧ್ಯಮದೆದುರು ಪ್ರದರ್ಶಿಸಿದರು.

ಪಾಶ್ಚಾತ್ಯ ಶಾಸ್ತ್ರೀಯ ಸ್ವರಗಳಿಗೆ ವಾಯ್ಲಿನ್ ತಂತಿಗಳ ಮೂಲಕ ಜೀವ ತುಂಬುವ ಅಬ್ರೆಯೊ ಅವರ ಒಂಭತ್ತು ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾದ ಗಾತ್ರದ ವಾಯ್ಲಿನ್ ಪರಿಕರವನ್ನು ಹೊಂದಿದ್ದಾರೆ. ವಾಯ್ಲಿನ್‌ನಿಂದ ಇಂಪಾದ ಸ್ವರವನ್ನು ಹೊರಡಿಸುತ್ತಾ ಈ ಮಕ್ಕಳು ಪಾಶ್ಚಾತ್ಯ ಶೈಲಿಯ ನೃತ್ಯವನ್ನೂ ಪ್ರದರ್ಶಿಸುವ ಮೂಲಕ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತಾರೆ.

ಅಬ್ರೆಯೊ ಅವರ ಪ್ರಥಮ ಪುತ್ರ, 18ರ ಹರೆಯದ ಮೈಕಲ್ ಟೆಕ್ಸಾಸ್‌ನ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ಸೇರಿದ್ದು, ಆತ ಮುಂದೆ ತನ್ನ ತಂದೆಯ ಹಾದಿಯಲ್ಲೇ ವೈದ್ಯ ವೃತ್ತಿಯನ್ನಾರಿಸುವ ಇರಾದೆ ಹೊಂದಿದ್ದಾನೆ. ಉಳಿದಂತೆ 17ರ ಹರೆಯದ ಡೇನಿಯಲ್, 15ರ ಹರೆಯದ ಕ್ರಿಸ್ತೀನಾ, 13ರ ಹರೆಯದ ಮರಿಯಾ, 11ರ ಹರೆಯದ ಜೇನ್, 9ರ ಹರೆಯದ ರಾಚೆಲ್, ಏಳರ ಹರೆಯದ ಜಾನ್, 5ರ ಹರೆಯದ ಲೂಕ್ ಕೂಡಾ ಅತ್ಯಂತ ನಾಜೂಕಾಗಿ ಹಾಗೂ ಇಂಪಾಗಿ ವಾಯ್ಲಿನ್ ಬಾರಿಸುತ್ತಾರೆ. ಇನ್ನು ಅತಿ ಕಿರಿಯವನಾದ ಮೂರರ ಹರೆಯದ ಜೋಸ್ ಕಳೆದ ಮೂರು ತಿಂಗಳಿನಿಂದ ವಾಯ್ಲಿನ್ ವಾದನವನ್ನು ಕಲಿಯುತ್ತಿದ್ದಾನೆ. ತನ್ನ ಕಿರು ಬೆರಳುಗಳಿಂದ ತನ್ನ ಸಹೋದರ ಸಹೋದರಿಯ ಜತೆ ಆತ ವಾಯ್ಲಿನ್ ತಂತಿಗಳನ್ನು ಮೀಟುತ್ತಿದ್ದರೆ ನೋಡುಗರು ಖಂಡಿತಾ ಹುಬ್ಬೇರಿಸಬೇಕು.

2 ವರ್ಷಗಳಿಗೊಮ್ಮೆ ಬಂದು ಅನಾಥಾಶ್ರಮಗಳಲ್ಲಿ ಸಂಗೀತ ಕಛೇರಿ ನೀಡುತ್ತಾರೆ!

ಮೂಲತ: ಮಂಗಳೂರಿನವರಾದ ಡಾ. ಜೆರಾರ್ಡ್ ಅವರ ಕುಟುಂಬಿಕರು ಇಲ್ಲಿಯೇ ನೆಲೆಸಿರುವ ಕಾರಣ ಎರಡು ವರ್ಷಗಳಿಗೊಮ್ಮೆ ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಆಗಮಿಸಿ ನಗರದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಂಗೀತ ಕಛೇರಿ ಏರ್ಪಡಿಸಿ ಸಂತಸ ಹಾಗೂ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.

‘‘ನನ್ನ ಹಿರಿಯ ಮಕ್ಕಳಾದ ಮೈಕಲ್, ಡೇನಿಯಲ್, ಕ್ರಿಸ್ತೀನ್ ಹಾಗೂ ಮರಿಯಾ ಟೆಕ್ಸಾಸ್‌ನಲ್ಲಿ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿ ವಾಯ್ಲಿನ್ ನುಡಿಸುತ್ತಾರೆ. ಮೈಕಲ್ ಹಾಗೂ ಕ್ರಿಸ್ತಿನ್ ಟೆಕ್ಸಾಸ್‌ನಲ್ಲಿ ರಾಜ್ಯ ಮಟ್ಟದ ಸಂಗೀತ ಕಛೇರಿಗಳಲ್ಲಿಯೂ ಭಾಗವಹಿಸುತ್ತಾರೆ’’ ಎನ್ನುತ್ತಾರೆ ಡಾ. ಅಬ್ರೆಯೊ.

ಮೆದುಳಿನ ಬೆಳವಣಿಗೆಗೆ ಸಂಗೀತ ಪೂರಕ

ಟೆಕ್ಸಾಸ್‌ನಲ್ಲಿ ಹೃದ್ರೋಗ ತಜ್ಞರಾಗಿರುವ ಡಾ. ಜೆರಾರ್ಡ್ ಹೇಳುವ ಪ್ರಕಾರ, ‘‘ಸಂಗೀತವು ಮೆದುಳಿನ ಬೆಳವಣಿಗೆಯನ್ನು ಸಮಗ್ರಗೊಳಿಸುತ್ತದೆ. ಮಾತ್ರವಲ್ಲದೆ, ಸಂಗೀತ ಶಿಸ್ತು ಹಾಗೂ ಏಕಾಗ್ರತೆಯನ್ನೂ ಕಲಿಸುತ್ತದೆ.’’

‘‘ನಾನು ಬಾಲ್ಯದಲ್ಲಿ ನನ್ನ ಸಹೋದರರ ಜತೆ ಡ್ರಮ್ಸ್ ಬಾರಿಸುತ್ತಿದ್ದೆ. ನನ್ನ ಸಹೋದರ ಗಿಟಾರ್ ಬಾರಿಸುತ್ತಿದ್ದರೆ, ಸಹೋದರಿಯರು ಪಿಯಾನೋ ಬಾರಿಸುತ್ತಿದ್ದರು. ಹಾಗಾಗಿ ಬಾಲ್ಯದಲ್ಲೇ ಸಂಗೀತದ ಜತೆ ನನಗೆ ನಂಟು ಬೆಳೆದಿತ್ತು. ಇದು ನನ್ನ ವೈದ್ಯಕೀಯ ಶಿಕ್ಷಣದ ಸಂದರ್ಭವೂ ಮುಂದುವರಿಯಿತು. ಟೊರೆಂಡೋ ಸಂಗೀತ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಪದವೀಧರೆಯಾಗಿರುವ ನನ್ನ ಪತ್ನಿ ನಿಕೋಲ್ ಅಬ್ರೆಯೊ ನನ್ನ ಸಂಗೀತ ಪ್ರೇಮವನ್ನು ಹವ್ಯಾಸವನ್ನಾಗಿಸಿದಳು’’ ಎಂದು ಪತ್ನಿ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ ಡಾ. ಜೆರಾರ್ಡ್.

ದಿನದ ಒಂದು ತಾಸು ಅಭ್ಯಾಸ:

‘‘ಪ್ರತಿ ದಿನ ಒಂದು ತಾಸು ವಾಯ್ಲಿನ್ ಅಭ್ಯಾಸವನ್ನು ಮನೆಯಲ್ಲಿ ಜತೆಯಾಗಿ ಮಾಡುತ್ತೇವೆ. ವಾಯ್ಲಿನ್ ನುಡಿಸುವುದು ನಮಗೆ ಖುಷಿ ಕೊಡುತ್ತದೆ’’ ಎನ್ನುತ್ತಾರೆ 13ರ ಹರೆಯದ ಮರಿಯಾ.

ಮಕ್ಕಳಿಗೆ ತಾಯಿಯೇ ಮೊದಲ ಸಂಗೀತ ಗುರು!

ಡಾ. ಜೆರಾರ್ಡ್ ಅವರ ಒಂಭತ್ತು ಮಂದಿ ಮಕ್ಕಳಿಗೂ ವಾಯ್ಲಿನ್ ವಾದನದ ಮೊದಲ ಗುರು ತಾಯಿ ನಿಕೋಲ್. ಮಕ್ಕಳಿಗೆ ಮೂರು ವರ್ಷ ತುಂಬುತ್ತಲೇ ನಿಕೋಲ್ ವಾಯ್ಲಿನ್ ಬಾರಿಸುವ ತರಬೇತಿ ಆರಂಭಿಸುತ್ತಾರೆ. ಏಳನೆ ತರಗತಿಯ ಬಳಿಕ ಸಂಗೀತ ತರಗತಿಯ ಮೂಲಕ ತರಬೇತಿ ಕೊಡಿಸಲಾಗುತ್ತದೆ. ವಾಯ್ಲಿನ್ ಅಲ್ಲದೆ ಮಕ್ಕಳು ಕಿರಿಯವನಾದ ಜೋಸ್ ಹೊರತುಪಡಿಸಿ ಪಿಯಾನೊ ಕೂಡಾ ಬಾರಿಸುತ್ತಾರೆ.

ನಿಕೋಲ್ ಅಬ್ರೆಯೊ ಅವರ ಸಂಬಂಧಿ ಲೋಬೋ ಅವರು ಕಳೆದ 60 ವರ್ಷಗಳಿಂದ ವಾಯ್ಲಿನ್ ವಾದಕರಾಗಿ ಹೆಸರು ಪಡೆದವರು. ಆರಂಭದಲ್ಲಿ ಅವರಿಂದಲೇ ನಿಕೋಲ್ ಕೂಡಾ ವಾಯ್ಲಿನ್ ವಾದನವನ್ನು ಕಲಿತವರು. ನಿಕೋಲ್ ಅವರ ತಂದೆ ಜೆರಾಲ್ಡ್ ಲೋಬೋ ಸಂಗೀತಗಾರರಾಗಿದ್ದ ಕಾರಣ, ಅವರು ಸಾಕಷ್ಟು ಸಂಗೀತ ಪರಿಕರಗಳನ್ನು ನುಡಿಸುವ ಜ್ಞಾನವನ್ನು ಹೊಂದಿದವರಾಗಿದ್ದಾರೆ.

ಜೂ. 15ರಂದು ಬಜ್ಜೋಡಿ ವೃದ್ಧಾಶ್ರಮದಲ್ಲಿ ಸಂಗೀತ ಕಾರ್ಯಕ್ರಮ:
ಡಾ. ಜೆರಾರ್ಡ್ ಅಬ್ರೆಯೊ ಅವರ ಮಕ್ಕಳಿಂದ ಜೂ. 15ರಂದು ನಂತೂರು ಸಮೀಪದ ಬಜ್ಜೋಡಿಯ ಲಿಟಲ್ ಸಿಸ್ಟರ್ಸ್ ಆಫ್ ದಿ ಪುವರ್- ವೃದ್ಧಾಶ್ರಮದಲ್ಲಿ ಸಂಜೆ 3.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News