ನನ್ನ ಅಜ್ಜಿಯ "ಉಪ್ಪಿನ ಉಪವಾಸ"ದ ಹಿಂದಿನ ರಹಸ್ಯ ಏನು?

Update: 2017-06-14 13:10 GMT

ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಎಲ್ಲರಿಗೂ ಗೊತ್ತು. ಆದರೆ ಈ ಅಜ್ಜಿಯ ಉಪ್ಪಿನ ಉಪವಾಸ ಯಾವುದು ಎಂದು ಹುಬ್ಬೇರಿಸಬಹುದು. ಹೌದು ನನ್ನಜ್ಜಿಯ ಉಪ್ಪಿನ ಉಪವಾಸದ ಕಥೆ ಹೇಳಲೇಬೇಕು. ರಮಝಾನ್ ನಲ್ಲಿ 30 ಉಪವಾಸಗಳಿದ್ದರೂ ನನ್ನಜ್ಜಿಗೆ ಇರುವುದು ವರ್ಷಕ್ಕೆ ಕೇವಲ ಎರಡೇ ಉಪವಾಸಗಳು. ಅವರು ಆಚರಿಸುವ ಉಪವಾಸದ ರೀತಿಯೂ ವಿಶಿಷ್ಟ. ಕೇವಲ ಉಪ್ಪಿನ ಒಂದು ಹರಳನ್ನು ಬಾಯಿಗೆ ಹಾಕಿ ನೀರು ಕುಡಿದು ದಿನಪೂರ್ತಿ ಉಪವಾಸವಿರುವುದು ನನ್ನಜ್ಜಿಯ ಉಪವಾಸದ ರೀತಿ. ಹೀಗೆ ಎರಡು ದಿನಗಳು ಮಾತ್ರ ಆಕೆ ಇದನ್ನು ಪಾಲಿಸುತ್ತಿದ್ದು, ಉಳಿದ 28 ದಿನಗಳ ಕಾಲ ಉಪವಾಸ ಆಚರಿಸುತ್ತಿರಲಿಲ್ಲ. 

ನಾನು ಉಲ್ಲೇಖಿಸುತ್ತಿರುವುದು ಸುಮಾರು 30-35 ವರ್ಷಗಳ ಹಿಂದಿನ ಘಟನೆ. ನನ್ನ ತಂದೆಯ ಅಮ್ಮ ಅಂದರೆ ನನ್ನ ಅಜ್ಜಿ ತುಂಬಾ ಬಡತನದಲ್ಲಿ ಬದುಕಿದವರು. ನಾನಾಗ ಕೇವಲ 10-12 ವರ್ಷದ ಬಾಲಕ. ನನಗೂ ರಮಝಾನ್ ತಿಂಗಳು ಬಂತೆಂದರೆ ಎಲ್ಲಿಲ್ಲದ ಖುಷಿ. ಮನೆಯಲ್ಲಿ ಅಮ್ಮನ ಜೋಳದ ರೊಟ್ಟಿಯ ಹೊರತಾಗಿ ಸಂಜೆ ವೇಳೆ ಮಸೀದಿಯಲ್ಲಿ ಬೇರೆ ಬೇರೆ ಮನೆಗಳಿಂದ ತರತರಹದ ಅಡುಗೆ ರುಚಿ ನೋಡುವ ಒಂದು ಸುವರ್ಣಾವಕಾಶವನ್ನು ರಮಝಾನ್ ನನಗೆ ಒದಗಿಸುತ್ತಿತ್ತು. ಉಪವಾಸವಿಲ್ಲದಿದ್ದರೂ ಉಪವಾಸಿಗನಂತೆ ನಟಿಸಿ ಮಸೀದಿಯಲ್ಲಿ ದೊರೆಯುವ ಇಫ್ತಾರ್ ಭೋಜನಕ್ಕೆ ಹಾಜರಾಗುವುದು ನನ್ನ ಹಾಗೂ ನನ್ನ ಸ್ನೇಹಿತರ ನಿತ್ಯಕರ್ಮವಾಗಿದ್ದವು. ಮನೆಯಲ್ಲಿ ಬಡತನದ ಬೇಗೆಯಿಂದ ಬಳಲುತ್ತಿದ್ದ ಆ ಕಾಲದಲ್ಲಿ ರುಚಿಶುಚಿಯಾದ ಊಟ ಸಿಗುವುದೆಂದರೆ ಕೇವಲ ಎರಡು ಹಬ್ಬಗಳ ಸಂದರ್ಭದಲ್ಲಿ ಮಾತ್ರ. ಅದು ಬಿಟ್ಟರೆ ಈ ರಮಝಾನ್ ಉಪವಾಸ ತೊರೆಯುವ ಇಫ್ತಾರ್ ಸಮಯದಲ್ಲಿ. 

ಈಗ ಅಜ್ಜಿಯ ಉಪ್ಪಿನ ಉಪವಾಸಕ್ಕೆ ಬಂದರೆ ಈಗಲೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕೆಲ ಹಿರಿ ತಲೆಮಾರಿನವರು ಕೇವಲ ಒಂದು ಹರಳು ಉಪ್ಪು ಸೇವಿಸಿ ಉಪವಾಸ ಆಚರಿಸುವ ಪದ್ಧತಿಯುಂಟು. ಇದು ಧಾರ್ಮಿಕವೂ-ಅಧಾರ್ಮಿಕವೋ ಗೊತ್ತಿಲ್ಲ. ಆದರೆ 45 ಡಿಗ್ರಿ ಸೆಲಿಸಿಯಸ್ ಉರಿಬಿಸಿಲಿನಲ್ಲೂ ಕೇವಲ ಒಂದು ಲೋಟ ನೀರು ಮತ್ತು ಉಪ್ಪನ್ನು ಸೇವಿಸಿ ಇಡೀ ದಿನ ಉಪವಾಸ ಆಚರಿಸಲು ಅವರಿಗೆ ಯಾವ ಶಕ್ತಿ ಪ್ರೇರಣೆ ನೀಡುತ್ತದೋ ಆ ದೇವನೇ ಬಲ್ಲ. ಅಂತೂ ಉಪವಾಸಕ್ಕೆ ಅಂತಹ ದೈವಿಕ ಶಕ್ತಿಯಿದೆ ಎನ್ನುವುದು ಮಾತ್ರ ಸತ್ಯ. ಅಂದ ಹಾಗೆ ನನ್ನ ಅಜ್ಜಿಯ ಆ ಉಪ್ಪಿನ ಉಪವಾಸದ ರಹಸ್ಯ ಮಾತ್ರ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. 

Writer - ಎಂ.ಆರ್.ಮಾನ್ವಿ

contributor

Editor - ಎಂ.ಆರ್.ಮಾನ್ವಿ

contributor

Similar News