ಉತ್ತರ ಪ್ರದೇಶ: “ಡೀಸೆಲ್ ಇಲ್ಲ” ಎಂಬ ಕಾರಣ ನೀಡಿ ಗರ್ಭಿಣಿಗೆ ಆ್ಯಂಬುಲೆನ್ಸ್ ಒದಗಿಸದ ಆಸ್ಪತ್ರೆ
ಸಹರಾನ್ಪುರ, ಜೂ.14: ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟಕ್ಕೀಡಾಗಿರುವ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿರುವ ಮತ್ತೊಂದು ಪ್ರಕರಣ ರಾಜ್ಯದ ಆಸ್ಪತ್ರೆಗಳಲ್ಲಿನ ಸೌಲಭ್ಯಗಳ ಕೊರತೆಗೆ ಸಾಕ್ಷಿಯಾಗಿದೆ.
ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯೊಬ್ಬರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆರಿಗೆ ನೋವು ತೀವ್ರವಾದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯವಂತೆ ವೈದ್ಯರು ಹೇಳಿದ್ದರು. ಹೀಗಾಗಿ ಮಹಿಳೆಯ ಸಂಬಂಧಿಕರು ಆ್ಯಂಬುಲೆನ್ಸ್ ನೀಡುವಂತೆ ಆಸ್ಪತ್ರೆಯ ವೈದ್ಯರಲ್ಲಿ ಕೇಳಿದ್ದು, “ಡೀಸೆಲ್ ಇಲ್ಲ” ಎಂಬ ಕಾರಣ ನೀಡಿ ಆ್ಯಂಬುಲೆನ್ಸ್ ಒದಗಿಸದ ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಯ ಆವರಣದಲ್ಲಿ ನಾಲ್ಕು ಆ್ಯಂಬುಲೆನ್ಸ್ ಗಳಿದ್ದು, ಆದರೆ ಆಸ್ಪತ್ರೆಯ ಆಡಳಿತ ಯಾವುದರಲ್ಲೂ ಡೀಸೆಲ್ ಇಲ್ಲ ಎಂದು ಹೇಳಲಾಗಿದೆ.
“ನಾವು 102, 108 ತುರ್ತು ಸೇವೆಗೂ ಕರೆ ಮಾಡಿದ್ದೆವು. ಆದರೆ ಯಾವುದೇ ಸಹಾಯ ಸಿಗಲಿಲ್ಲ. ರಾತ್ರಿ ಸುಮಾರು 12:30ರ ವೇಳೆಗೆ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾಮಾನ್ಯ ಹೆರಿಗೆಯಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಆದರೆ ಆಕೆ ತೀವ್ರವಾದ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಆಗಲೂ ಸಾಮಾನ್ಯ ಹೆರಿಗೆಯಾಗುತ್ತದೆ ಎಂದು ಹೇಳಲಾಗಿತ್ತು. ಕೆಲ ಗಂಟೆಗಳ ನಂತರ ಬೇರೆ ಶಿಫ್ಟ್ ನ ವೈದ್ಯರು ಪತ್ನಿಯನ್ನು ಪರೀಕ್ಷಿಸಿದ್ದು, ರಕ್ತದ ಕೊರತೆಯಿದೆ, ಆದ್ದರಿಂದ ಸಹರಾನ್ಪುರಕ್ಕೆ ಕೂಡಲೇ ಕರೆದೊಯ್ಯಬೇಕು ಎಂದು ಹೇಳಿದ್ದರು” ಎಂದು ಮಹಿಳೆಯ ಪತಿ ಮಾಹಿತಿ ನೀಡಿದ್ದಾರೆ.
ಸಹರಾನ್ಪುರಕ್ಕೆ ಆಕೆಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ನೀಡುವಂತೆ ನಾವು ಕೇಳಿದ್ದೆವು. ಆದರೆ ನಾಲ್ಕು ಆ್ಯಂಬುಲೆನ್ಸ್ ಗಳಲ್ಲೂ ಡೀಸೆಲ್ ಕಡಿಮೆಯಿದೆ ಎಂದು ಹೇಳಲಾಯಿತು. ಡೀಸೆಲ್ ಹಣ ನೀಡುತ್ತೇನೆ ಎಂದು ಹೇಳಿದರೂ ನಮಗೆ ಅವರಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದವರು ವಿವರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ವೈದ್ಯಕೀಯ ಅಧಿಕಾರಿ ಬಿ.ಎಸ್. ಸೋಧಿ, ಪ್ರಕರಣದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.