ಐಐಟಿ ಕನಸಿಗೆ ಬಡತನ ಅಡ್ಡಿ: ತರಕಾರಿ ಮಾರುತ್ತಿರುವ ಛತ್ತೀಸ್ ಗಡದ 12ನೆ ತರಗತಿ ಟಾಪರ್!
ಛತ್ತೀಸ್ ಗಡ, ಜೂ.14: ಛತ್ತೀಸ್ ಗಡ 12ನೆ ತರಗತಿ ರಾಜ್ಯ ಪರೀಕ್ಷಾ ಮಂಡಳಿ ನಡೆಸಿದ್ದ ಈ ಬಾರಿಯ ಪರೀಕ್ಷೆಯಲ್ಲಿ 98.6 ಶೇ. ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದ ಸಂದರ್ಭ ಧಾವೇಂದ್ರ ಕುಮಾರ್ ಹಾಗೂ ಅವರ ಪೋಷಕರ ಕನಸಿನ ಮೊದಲ ಹಂತ ನನಸಾಗಿತ್ತು. ಆದರೆ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಐಐಟಿ ಪ್ರವೇಶದ ಕನಸು ಕಂಡಿದ್ದ ಧಾವೇಂದ್ರರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ತಡೆಯೊಡ್ಡಿದ್ದು, ಇದೀಗ ರಾಜ್ಯದ ಟಾಪರ್ ತಾಯಿಯೊಂದಿಗೆ ತರಕಾರಿ ಮಾರುತ್ತಿದ್ದಾರೆ.
ಎಪ್ರಿಲ್ ನಲ್ಲಿ ಪ್ರಕಟವಾಗಿದ್ದ ಫಲಿತಾಂಶದಲ್ಲಿ 3.95 ಲಕ್ಷ ಮಕ್ಕಳಲ್ಲಿ ಧಾವೇಂದ್ರ 98.6 ಶೇ. ಅಂಕ ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದರು. ಆದರೆ ಆರ್ಥಿಕ ಸಂಕಷ್ಟ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತಡೆಯಾಗಿದೆ. ಐಐಟಿ ಪ್ರವೇಶ ಗಿಟ್ಟಿಸಲು ಟ್ಯುಟೋರಿಯಲ್ ಒಂದನ್ನು ಸೇರಬಯಸಿದ್ದ ಧಾವೇಂದ್ರ ಅಲ್ಲಿನ ವಾರ್ಷಿಕ ಶುಲ್ಕ 1.3 ಲಕ್ಷ ರೂ,ಗಳನ್ನು ಕಂಡು ಮಾತೇ ಹೊರಡದಂತಾಗಿದ್ದರು.
ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ನೀಡುವ ಭರವಸೆಯನ್ನು ಬಲೋದ್ ಜಿಲ್ಲಾಡಳಿತ ನೀಡಿತ್ತು. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿಯಿತು ಎನ್ನುತ್ತಾರೆ ಧಾವೇಂದ್ರ.
ತನ್ನ ಗ್ರಾಮದಿಂದ ಕೆಲ ಕಿ.ಮೀ. ಅಂತರದ ಸರಕಾರಿ ಹೈಸ್ಕೂಲ್ ನ ವಿದ್ಯಾರ್ಥಿಯಾಗಿದ್ದ ಧಾವೇಂದ್ರ 10ನೆ ತರಗತಿಯಲ್ಲಿ 90 ಶೇ, ಅಂಕ ಗಳಿಸಿದ್ದರು. “ಸರಕಾರಕ್ಕೆ ಟಾಪರ್ ಗಳ ಬಗ್ಗೆ ಗೌರವವಿಲ್ಲ ಎಂದು ನನಗನಿಸುತ್ತದೆ” ಎನ್ನುತ್ತಾರೆ ರಸ್ತೆಬದಿ ತರಕಾರಿ ಮಾರುತ್ತಿರುವ ಛತ್ತೀಸ್ ಗಡದ ಟಾಪರ್.
“10ನೆ ತರಗತಿಯಲ್ಲಿ ನನ್ನ ಮಗ 90 ಶೇ, ಅಂಕ ಗಳಿಸಿದ್ದು, ಈ ಬಾರಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ. ಆದರೆ ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. ಆತ ಬಯಸುವ ಕಡೆ ಕೋಚಿಂಗ್ ಗೆ ಸೇರಿಸಲು ನಮಗೆ ಸಾಧ್ಯವಿಲ್ಲ” ಎನ್ನುತ್ತಾರೆ ಧಾವೇಂದ್ರರ ತಾಯಿ.
ಒಬ್ಬ ಸಾಧಾರಣ ರೈತನಾಗಿರುವ ಧಾವೇಂದ್ರರ ತಂದೆಯ ಆದಾಯ ಅಲ್ಪವಾಗಿದೆ. ಇದೇ ಕಾರಣದಿಂದ ತಮ್ಮ ಇನ್ನೊರ್ವ ಪುತ್ರನ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ. “ಆಡಳಿತದೊಂದಿಗೆ ನಾನು ನಂಬಿಕೆ ಕಳೆದುಕೊಂಡಿದ್ದೇನೆ. ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ ನಲ್ಲಿ ಪ್ರವೇಶಕ್ಕಾಗಿ ನಾನು ಅರ್ಜಿ ಸಲ್ಲಿಸಿದ್ದೆ. ಆದರೆ ಹಣಕಾಸಿನ ಮುಗ್ಗಟ್ಟಿನಿಂದ ಅಲ್ಲಿಗೆ ಸೇರಲು ಸಾಧ್ಯವಾಗಿಲ್ಲ” ಎನ್ನುತ್ತಾರೆ ಧಾವೇಂದ್ರ.
ಬೋರ್ಡ್ ಪರೀಕ್ಷೆಯಲ್ಲಿ 500ರಲ್ಲಿ 493 ಅಂಕ ಗಳಿಸಿದ್ದ ಧಾವೇಂದ್ರ ರಸಾಯನ ಶಾಸ್ತ್ರ ಹಾಗು ಗಣಿತದಲ್ಲಿ 99 ಅಂಕ ಗಳಿಸಿದ್ದರು.