ಯುದ್ದಕ್ಕೆ ಆದೇಶಿಸುವರನ್ನು ಗಡಿಗೆ ಕಳುಹಿಸಿ: ಸಲ್ಮಾನ್ ಖಾನ್

Update: 2017-06-14 16:31 GMT

ಹೊಸದಿಲ್ಲಿ, ಜೂ.14: ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದು ಸೂಕ್ತ ಎಂದಿರುವ ಹಿಂದಿ ಸಿನೆಮ ನಟ ಸಲ್ಮಾನ್ ಖಾನ್, ಉಭಯ ದೇಶಗಳ ಮಧ್ಯೆ ಯುದ್ದ ನಡೆಯಬೇಕೆಂದು ಬಯಸುವವರನ್ನು ಗಡಿಭಾಗಕ್ಕೆ ರವಾನಿಸಬೇಕು ಎಂದಿದ್ದಾರೆ.

ಯುದ್ದ ನಡೆಯಲಿ ಎಂದು ಆದೇಶಿಸುವವರನ್ನು ಗಡಿಯ ಮುಂಚೂಣಿ ನೆಲೆಗಳಿಗೆ ಕಳಿಸಿ, ಮೊದಲು ನೀವು ಯುದ್ದ ಮಾಡಿ ಎಂದು ತಿಳಿಸಬೇಕು. ಆಗ ಅವರ ಕೈಕಾಲು ನಡುಗುತ್ತವೆ. ಒಂದೇ ದಿನದಲ್ಲಿ ಯುದ್ದ ಮುಗಿಯುತ್ತದೆ. ಬಳಿಕ ಅವರು ಮಾತುಕತೆಗೆ ಮುಂದಾಗುತ್ತಾರೆ ಎಂದು ಸಲ್ಮಾನ್ ಹೇಳಿದರು. ತಮ್ಮ ಹೊಸ ಸಿನೆಮ ‘ಟ್ಯೂಬ್‌ಲೈಟ್’ನ ಪ್ರಚಾರಕಾರ್ಯ ನಿಮಿತ್ತ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

 ಯುದ್ದ ಸಂಭವಿಸಿದರೆ ಎರಡೂ ದೇಶಗಳ ನಾಗರಿಕರಿಗೆ ತೊಂದರೆಯಾಗುತ್ತದೆ. ಎರಡೂ ಕಡೆಯ ನಾಗರಿಕರು ಸಾಯುತ್ತಾರೆ . ಮಾತುಕತೆ ಮತ್ತು ಶಾಂತಿ- ಇವರೆಡು ಮಾತ್ರ ಈಗ ಭಾರತ-ಪಾಕ್ ಎದುರಿಗಿರುವ ಆಯ್ಕೆಯಾಗಿದೆ ಎಂದು ಸಲ್ಮಾನ್ ಹೇಳಿದರು. ಸಲ್ಮಾನ್ ಸೋದರ ಸೊಹೈಲ್ ಖಾನ್ ಸುದ್ದಿಗೋಷ್ಠಿಯಲ್ಲಿದ್ದರು.

 ಸಲ್ಮಾನ್ ಹೇಳಿಕೆಯನ್ನು ಖಂಡಿಸಿರುವ ಶಿವಸೇನೆ, ಸಲ್ಮಾನ್‌ಗೆ ಯಾವಾಗಲೂ ತಮ್ಮ ಮಿತಿಯನ್ನು ಮೀರುವ ಅಭ್ಯಾಸವಿದೆ . ಸಲ್ಮಾನ್ ಹೇಳಿಕೆ ಆಕ್ಷೇಪಣಾರ್ಹವಾಗಿದೆ ಎಂದು ಟೀಕಿಸಿದೆ.

ಸಲ್ಮಾನ್ ಹೇಳಿಕೆ ಒಂದು ಪ್ರಚಾರತಂತ್ರ ಎಂದು ಎನ್‌ಸಿಪಿ ವಕ್ತಾರರು ಟೀಕಿಸಿದ್ದಾರೆ.

ಆದರೆ ಸಲ್ಮಾನ್ ಹೇಳಿಕೆಯನ್ನು ಬೆಂಬಲಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಸಂಜಯ್ ಝಾ, ಇದೊಂದು ಪ್ರಬುದ್ಧ, ವಿವೇಕಯುಕ್ತ ಮತ್ತು ಸೂಕ್ಷ್ಮಸಂವೇದನೆಯ ಹೇಳಿಕೆಯಾಗಿದೆ ಎಂದು ಶ್ಲಾಘಿಸಿದ್ದಾರೆ.

     ಹೇಳಿಕೆಗೆ ಬೆಂಬಲ ಸೂಚಿಸಿರುವ ಸಲ್ಮಾನ್ ತಂದೆ ಹಾಗೂ ಸಾಹಿತ್ಯ ರಚನೆಕಾರ ಸಲೀಮ್ ಖಾನ್, ಯುದ್ದ ಎಂಬುದು ವಿವೇಚನಾಯುಕ್ತ ಆಯ್ಕೆಯಲ್ಲ. ಇದನ್ನೇ ಇತಿಹಾಸದಲ್ಲಿ ದಾಖಲಾಗಿರುವ ಹಲವು ಖ್ಯಾತ ವ್ಯಕ್ತಿಗಳು ಹೇಳಿದ್ದಾರೆ ಎಂದಿದ್ದಾರೆ. 1962ರ ಭಾರತ-ಚೀನಾ ನಡುವಿನ ಯುದ್ದದ ಕಥೆಯುಳ್ಳ ‘ಟ್ಯೂಬ್‌ಲೈಟ್’ ಸಿನೆಮದಲ್ಲಿ ಸಲ್ಮಾನ್ ಜೊತೆಗೆ ಚೀನಾದ ನಟರಾದ ಝು ಝು ಕೂಡಾ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News