ನೀವು ಒಂಟಿಯೇ....? ನಿಮ್ಮ ತಿಂಡಿಯನ್ನು ರುಚಿಕರವನ್ನಾಗಿಸಲು ಈ ಟ್ರಿಕ್ ಬಳಸಿ ನೋಡಿ

Update: 2017-06-14 18:27 GMT

ಸಾಮಾನ್ಯವಾಗಿ ವೃದ್ಧರು ಮನೆಯಲ್ಲಿ ಜನರಿದ್ದರೂ ಒಂಟಿ ಯಾಗಿರುತ್ತಾರೆ, ಹಾಗೆಯೇ ಮನೆಯಲ್ಲಿ ಯಾರೂ ಇಲ್ಲದೆ ಒಂಟಿಯಾಗಿ ರುವವರೂ ಇದ್ದಾರೆ. ಊಟ, ತಿಂಡಿ ಎಲ್ಲದರಲ್ಲೂ ಒಂಟಿತನ ಈ ಜನರನ್ನು ಕಾಡುತ್ತಿರುತ್ತದೆ. ಇಂತಹ ಒಂಟಿ ಹಿರಿಯ ಜೀವಗಳು ಬೆಳಗಿನ ತಿಂಡಿಯನ್ನೋ ಊಟವನ್ನೋ ಕನ್ನಡಿಯ ಎದುರು ಅಥವಾ ಊಟ ಮಾಡುತ್ತಿರುವ ತಮ್ಮದೇ ಚಿತ್ರಗಳ ಎದುರು ಕುಳಿತು ಮಾಡಿದರೆ ಹೆಚ್ಚು ಆಹಾರ ಹೊಟ್ಟೆಗೆ ಸೇರುತ್ತದೆ ಎಂದು ಜಪಾನ್ ಸಂಶೋಧಕರು ಕಂಡು ಹಿಡಿದಿದ್ದಾರೆ. ಟಿವಿಯ ಬದಲು ಕನ್ನಡಿಯ ಮುಂದೆ ಕುಳಿತು ಊಟ ಮಾಡಿದರೆ ಉತ್ತಮ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಜನರು ಇನ್ನೊಬ್ಬರೊಂದಿಗೆ ತಿನ್ನುತ್ತಿರುವಾಗ ತಾವು ಒಂಟಿಯಾಗಿ ತಿನ್ನುವುದಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುತ್ತಾರೆ. ಆದರೆ ಒಂಟಿಯಾಗಿ ಊಟ ಮಾಡುವವರು ತಮ್ಮ ಪ್ರತಿಬಿಂಬವನ್ನು ತೋರಿಸುವ ಕನ್ನಡಿಯೆದುರು ಕುಳಿತರೆ ಇದೇ ಪರಿಣಾಮ ಬೀರುತ್ತದೆ, ಹೆಚ್ಚಿನ ಆಹಾರ ಹೊಟ್ಟೆಗೆ ಹೋಗುತ್ತದೆ ಎನ್ನುತ್ತಾರೆ ನಗೋಯಾ ವಿವಿಯ ಸಂಶೋಧಕರು.

ಸಂಶೋಧನಾ ತಂಡವು ಒಂಟಿಯಾಗಿ ಆಹಾರ ಸೇವನೆ ಮಾಡುವವರ ಎದುರು ಗೋಡೆಯ ಚಿತ್ರವಿದ್ದ ಮಾನಿಟರ್‌ಗಳನ್ನು ಅಳವಡಿಸಿತ್ತು. ಪ್ರತ್ಯೇಕ ಸಂದರ್ಭದಲ್ಲಿ ಅವರ ಎದುರು ಕನ್ನಡಿಗಳನ್ನು ಅಳವಡಿಸಿತ್ತು. ತಮ್ಮ ಪ್ರತಿಬಿಂಬಗಳನ್ನು ನೋಡುತ್ತ ಊಟ ಮಾಡಿದ ಅವರು ಮಾನಿಟರ್ ನೋಡುತ್ತ ಸೇವಿಸಿದ್ದಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸಿದ್ದರು ಎಂದು ತಂಡದ ನಾಯಕ ರ್ಯುಝಾಬರೊ ನಕಾಟಾ ಅವರು ತಿಳಿಸಿದರು.

ತಂಡವು ತನ್ನ ಆರಂಭಿಕ ಪ್ರಯೋಗಗಳಲ್ಲಿ ವೃದ್ಧರನ್ನೇ ಆಯ್ದು ಕೊಂಡಿತ್ತು. ಬಳಿಕ ಯುವಜನರ ಮೇಲೆ ಈ ಪ್ರಯೋಗ ನಡೆಸಿದಾಗಲೂ ಇದೇ ಪರಿಣಾಮ ಕಂಡು ಬಂದಿತ್ತು. ಅಂದರೆ ಒಂಟಿಯಾಗಿ ಊಟ ಮಾಡುವುದು ವೃದ್ಧರಿಗೆ ಮಾತ್ರವಲ್ಲ, ಯುವಜನರಿಗೂ ಕಷ್ಟವೇ ಎನ್ನುತ್ತಾರೆ ನಕಾಟಾ.

ಜರ್ನಲ್ ಆಫ್ ಫಿಸಿಯಾಲಜಿ ಆ್ಯಂಡ್ ಬಿಹೇವಿಯರ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News